ಉ.ಪ್ರದೇಶ: ವಿಧಾನಪರಿಷತ್ ಚುನಾವಣೆಯಲ್ಲಿ ಆದಿತ್ಯನಾಥ್ ಸ್ಪರ್ಧೆ

ಹೊಸದಿಲ್ಲಿ, ಆ.30: ಉತ್ತರಪ್ರದೇಶದ ವಿಧಾನಪರಿಷತ್‌ಗೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಸರಕಾರದ ನಾಲ್ವರು ಸಚಿವರನ್ನು ಕಣಕ್ಕಿಳಿಸಲು ಬಿಜೆಪಿಯ ಹೈಕಮಾಂಡ್ ನಿರ್ಧರಿಸಿದೆ.
ಸೆಪ್ಟೆಂಬರ್ 19ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆದಿತ್ಯನಾಥ್ ಜೊತೆ ಉಪಮುಖ್ಯಮಂತ್ರಿಗಳಾದ ಕೇಶವ್‌ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮ, ಸಚಿವರಾದ ಸ್ವತಂತ್ರದೇವ್ ಸಿಂಗ್ ಮತ್ತು ಮೊಹ್ಸಿನ್ ರಾಝ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಪ್ರಕಟಿಸಿದೆ.
ಎಸ್‌ಪಿ ಮತ್ತು ಬಿಎಸ್ಪಿ ಪಕ್ಷಗಳ ಅಭ್ಯರ್ಥಿಗಳಿಂದ ಸ್ಪರ್ಧೆ ಎದುರಿಸಲಿರುವ ಈ ಐವರು ಬಿಜೆಪಿ ಮುಖಂಡರು ಸೆಪ್ಟೆಂಬರ್ 19ರ ಒಳಗೆ ಸದನದ (ವಿಧಾನಸಭೆ ಅಥವಾ ವಿಧಾನಪರಿಷತ್) ಸದಸ್ಯರಾಗಿ ಆಯ್ಕೆಯಾಗಬೇಕಿದೆ. ಈ ಐವರಿಗಾಗಿ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಸಮಾಜವಾದಿ ಪಕ್ಷ(ಎಸ್‌ಪಿ) ದ ನಾಲ್ವರು ಹಾಗೂ ಬಿಎಸ್‌ಪಿಯ ಓರ್ವ ವಿಧಾನಪರಿಷತ್ ಸದಸ್ಯರ ಮನ ಒಲಿಸಲು ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ಈ ಮಧ್ಯೆ, ಆದಿತ್ಯನಾಥ್ ಮತ್ತು ಮೌರ್ಯ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ತೆರವುಗೊಳಿಸಲಿರುವ ಸಂಸದೀಯ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟಕ್ಕೆ ಬಿಜೆಪಿ ಪ್ರಯತ್ನ ಆರಂಭಿಸಿದೆ.





