ಅವಳಿ ವಿಶ್ವದಾಖಲೆಯ ಹಾದಿಯಲ್ಲಿ ಎಂ.ಎಸ್. ಧೋನಿ
.jpg)
ಕೊಲಂಬೊ, ಆ.30: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವಳಿ ವಿಶ್ವ ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ.
ಗುರುವಾರ ಕೊಲಂಬೊದ ಆರ್.ಪ್ರೇಮದಾಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವು ಧೋನಿ ಪಾಲಿಗೆ 300ನೆ ಏಕದಿನ ಪಂದ್ಯವಾಗಿದೆ.
300ನೆ ಪಂದ್ಯದಲ್ಲಿ ಧೋನಿ ಒಂದು ಸ್ಟಂಪ್ ಮಾಡಿದರೆ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟಂಪ್ ಮಾಡಿದ ವಿಶ್ವದಾಖಲೆ ಧೋನಿ ಪಾಲಾಗಲಿದೆ. ಪ್ರಸ್ತುತ ಧೋನಿ ಮತ್ತು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ್ ಅವರು ತಲಾ 99 ಸ್ಟಂಪಿಂಗ್ ಮಾಡಿರುವ ದಾಖಲೆ ಹೊಂದಿದ್ದಾರೆ. ಧೋನಿ ಸ್ಟಂಪಿಂಗ್‌ನಲ್ಲಿ ಶತಕ ದಾಖಲಿಸುವ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲ ಧೋನಿ ಇನ್ನೊಂದು ವಿಶ್ವ ದಾಖಲೆ ಬರೆಯುತ್ತ ನೋಡುತ್ತಿದ್ದಾರೆ. ಏಕದಿನ ದಿನ ಕ್ರಿಕೆಟ್‌ನಲ್ಲಿ 72 ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದ ದಾಖಲೆ ಧೋನಿ , ಶಾನ್ ಪೊಲಾಕ್ ಮತ್ತು ಚಮಿಂಡವಾಸ್ ಹೆಸರಲ್ಲಿದೆ. ಧೋನಿ ಇನ್ನೊಂದು ಇನಿಂಗ್ಸ್‌ನಲ್ಲಿ ಅಜೇಯರಾಗಿ ಉಳಿದರೆ ಗರಿಷ್ಠ ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದ ವಿಶ್ವ ದಾಖಲೆ ಧೋನಿ ಪಾಲಾಗಲಿದೆ.
2019ರ ವಿಶ್ವಕಪ್‌ಗೆ ಯುವ ವಿಕೆಟ್ ಕೀಪರ್ ಅಗತ್ಯ ಎಂಬ ಮಾತು ಕೇಳಿ ಬರುತ್ತಿದ್ದಂತೆ ಧೋನಿ ಅಪೂರ್ವ ಫಾರ್ಮ್‌ನ ಮೂಲಕ ತನ್ನನ್ನು ಟೀಕಿಸುವವರ ಬಾಯಿ ಮುಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ. 36ರ ಹರೆಯದ ಧೋನಿ ಯುವ ಕ್ರಿಕೆಟಿಗರನ್ನು ಮೀರಿಸುವ ರೀತಿಯಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಎರಡನೆ ಮತ್ತು ಮೂರನೆ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ದವಡೆಗೆ ಸಿಲುಕಿದ್ದಾಗ ಧೋನಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ತಳವೂರಿ ಬ್ಯಾಟಿಂಗ್ ನಡೆಸಿ ಭಾರತಕ್ಕೆ 3-0ಸರಣಿ ಗೆಲುವು ದಾಖಲಿಸಲು ದೊಡ್ಡ ಕೊಡುಗೆ ನೀಡಿದ್ದಾರೆ. ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ದಾಖಲಿಸಿರುವ ಭಾರತದ ನಾಲ್ಕನೆ ದಾಂಡಿಗ. 299 ಪಂದ್ಯಗಳ 257 ಇನಿಂಗ್ಸ್‌ಗಳಲ್ಲಿ ಧೋನಿ 9,608 ರನ್ ದಾಖಲಿಸಿದ್ದಾರೆ.
ಸಚಿನ್ ತೆಂಡುಲ್ಕರ್(18,426), ಸೌರವ್ ಗಂಗುಲಿ(11,221) ಮತ್ತು ರಾಹುಲ್ ದ್ರಾವಿಡ್(10, 768) ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ದಾಂಡಿಗರು.







