ಖಾತೆ ಬದಲಾಯಿಸಿ ಕೊಡದ ಬಿಬಿಎಂಪಿ ಜಂಟಿ ಆಯುಕ್ತರಿಗೆ 10 ಸಾವಿರ ರೂ.ದಂಡ
ಬೆಂಗಳೂರು, ಆ.30: ಹರಾಜಿನಲ್ಲಿ ತೆಗೆದುಕೊಂಡ ಎರಡು ಎಕರೆ ಜಾಗಕ್ಕೆ ಖಾತೆ ಬದಲಾಯಿಸಿ ಕೊಡಲು ನಿರಾಕರಿಸಿದ ರಾಜರಾಜೇಶ್ವರಿ ನಗರದ ಬಿಬಿಎಂಪಿ ಜಂಟಿ ಆಯುಕ್ತರಿಗೆ ಹೈಕೋರ್ಟ್ 10 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಈ ಸಂಬಂಧ ಪ್ಯಾರಾವೌಂಟ್ ಇಂಡಸ್ಟ್ರೀಸ್ ಕಂಪೆನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಎಂ.ಆರ್.ಬಾಲಕೃಷ್ಣ ಅವರು, ಅರ್ಜಿದಾರರಾದ ಪ್ಯಾರಾವೌಂಟ್ ಇಂಡಸ್ಟ್ರೀಸ್ ಕಂಪೆನಿ ಅವರು 2015ರ ಜನವರಿ 29ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನವರು ಪೂನಃ ಲಕಾನಿ ಅವರ ಎರಡು ಎಕರೆ ಜಾಗವನ್ನು ಹರಾಜು ಹಾಕುತ್ತಿದ್ದಾಗ ಆ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ. ಹೀಗಾಗಿ, ಈ ಜಾಗವನ್ನು ಪ್ಯಾರಾವೌಂಟ್ ಇಂಡಸ್ಟ್ರೀಸ್ ಕಂಪೆನಿ ಅವರು ತಮಗೆ ಖಾತೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರೆ ರಾಜರಾಜೇಶ್ವರಿನಗರದ ಬಿಬಿಎಂಪಿ ಜಂಟಿ ಆಯುಕ್ತರು ಅಕ್ರಮ ಖಡತಗಳನ್ನು ಸೃಷ್ಟಿಸಿ ಜಾಗವನ್ನು ಖರೀದಿ ಮಾಡಿದ್ದಾರೆ ಎಂದು ಅರ್ಜಿದಾರರಿಗೆ ಖಾತೆ ಬದಲಾಯಿಸಿ ಕೊಡಲು ನಿರಾಕರಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೆ, ಪೂನಃ ಲಕಾನಿ ಎನ್ನುವವರು ಪೀಣ್ಯದಲ್ಲಿರುವ ತಮ್ಮ ಎರಡು ಎಕರೆ ಜಾಗವನ್ನು ಅಡಮಾನವಿಟ್ಟು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸಾಲವನ್ನು ತೆಗೆದುಕೊಂಡಿದ್ದರು. ಆದರೆ, ಸಾಲವನ್ನು ವಾಪಸ್ ನೀಡಿರಲಿಲ್ಲ. ಹೀಗಾಗಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನವರು ಈ ಎರಡು ಎಕರೆ ಜಾಗವನ್ನು ಹರಾಜಿಗೆ ಇಟ್ಟಿದ್ದರು. ಹೀಗಾಗಿ, ಪ್ಯಾರಾವೌಂಟ್ ಇಂಡಸ್ಟ್ರೀಸ್ ಕಂಪೆನಿ ಅವರು ಆ ಹರಾಜಿನಲ್ಲಿ ಆ ಎರಡು ಎಕರೆ ಜಾಗವನ್ನು ಖರೀದಿಸಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು ಎಂದು ಪೀಠಕ್ಕೆ ತಿಳಿಸಿದರು.
ಜಿ.ವೆಂಕಟರತ್ನಂ ಎಂಬವರು ಪ್ಯಾರಾವೌಂಟ್ ಇಂಡಸ್ಟ್ರೀಸ್ ಕಂಪೆನಿ ಅವರು ಅಕ್ರಮವಾಗಿ ಜಮೀನು ಖರೀದಿಸಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿನಗರ ಜಂಟಿ ಆಯುಕ್ತರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಪ್ಯಾರಾವೌಂಟ್ ಇಂಡಸ್ಟ್ರೀಸ್ ಕಂಪೆನಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜಮೀನಿಗೆ ಖಾತೆ ಮಾಡಿಕೊಡದೆ ತಪ್ಪು ಮಾಡಿದ್ದೀರಿ. ಹಾಗೂ ವ್ಯಾಪ್ತಿ ಮೀರಿ ನಡೆದುಕೊಂಡಿದ್ದೀರಿ ಎಂದು ರಾಜರಾಜೇಶ್ವರಿನಗರದ ಬಿಬಿಎಂಪಿ ಜಂಟಿ ಆಯುಕ್ತರ ವಿರುದ್ಧ ಕಿಡಿಕಾರಿದ ಪೀಠವು. ನಾಲ್ಕು ವಾರದಲ್ಲಿ ಖಾತೆ ಬದಲಾಯಿಸಿ ಕೊಡಬೇಕೆಂದು ಆದೇಶಿಸಿ. ಜಂಟಿ ಆಯುಕ್ತರಿಗೆ 10 ಸಾವಿರ ರೂ.ದಂಡ ವಿಧಿಸಿ ಆದೇಶಿಸಿತು.







