ಮಸಾಜ್ ಕೇಂದ್ರಗಳಿಗೆ ಪೊಲೀಸ್ ದಾಳಿ: ಐವರು ವಶ; 11 ಮಂದಿ ಮಹಿಳೆಯರ ರಕ್ಷಣೆ
ಮಂಗಳೂರು, ಆ. 30: ನಗರದ ಎರಡು ಪ್ರತ್ಯೇಕ ಮಸಾಜ್ ಕೇಂದ್ರಗಳಿಗೆ ದಾಳಿ ನಡೆಸಿರುವ ಪೊಲೀಸರು ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, 11 ಮಹಿಳೆಯರನ್ನು ರಕ್ಷಿಸಿದ್ದಾರೆ.
ಕದ್ರಿ ಶಿವಬಾಗ್ ಬಳಿಯ ಇಂಡಿಯನ್ ಸ್ಯಾಂಡಲ್ ಆಯುರ್ವೇದಿಕ್ ಮಸಾಜ್ ಸೆಂಟರ್‌ಗೆ ದಾಳಿ ನಡೆಸಿರುವ ಪೊಲೀಸರು ಮಸಾಜ್ ಸೆಂಟರ್‌ನ ಮಾಲಕ ತೊಕ್ಕಟ್ಟಿನ ಪ್ರದೀಪ್ ಹಾಗೂ ಗ್ರಾಹಕರಾದ ಮುಳಿಹಿತ್ಲುವಿನ ಅಭಿಷೇಕ್, ಬೊಕ್ಕಪಟ್ನದ ಚಂದ್ರನಾಥ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1,500 ನಗದು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಐವರು ಮಹಿಳೆಯನ್ನು ರಕ್ಷಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕೆ.ಎಸ್.ರಾವ್ ರಸ್ತೆಯ ಸಂಜೀವಿನಿ ಆಯುರ್ವೇದಿಕ್ ಥೆರಪಿ ಕ್ಲಿನಿಕ್‌ಗೆ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನುಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಮಸಾಜ್ ಸೆಂಟರ್‌ನ ಮಾಲಕ ಮಂಗಳೂರಿನ ಹರೀಶ್ ಶೆಟ್ಟಿ ಹಾಗೂ ಮಂಜೇಶ್ವರದ ರವಿ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತರಿಂದ 500 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







