ಪರಿಶಿಷ್ಟರ ಕಲ್ಯಾಣಕ್ಕೆ ದೇಶದಲ್ಲೇ ಅತೀ ಹೆಚ್ಚು ಅನುದಾನ ಮೀಸಲು: ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ, ಆ.30: ರಾಜ್ಯ ಸರಕಾರ ಎಸ್ಸಿ, ಎಸ್ಟಿ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ದೇಶದಲ್ಲೇ ಅತೀ ಹೆಚ್ಚು ಅನುದಾನ ವೆಚ್ಚ ಮಾಡುವ ಮೂಲಕ ಅನುಕೂಲ ಕಲ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಲೂಕಿನ ತರಕಣಾಂಬಿಯಲ್ಲಿ ಬುಧವಾರ 131 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಲೋಕಾರ್ಪಣೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಎಸ್ಸಿ-ಎಸ್ಟಿ ವರ್ಗಗಳ ಜನತೆಗೆ ರಾಜ್ಯ ಸರಕಾರ ಅತೀ ಹೆಚ್ಚಿನ ನೆರವು ನೀಡುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ 89 ಸಾವಿರ ಕೋಟಿ ರೂ. ಪರಿಶಿಷ್ಟರ ಕಲ್ಯಾಣಕ್ಕೆ ವೆಚ್ಚ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 27 ಸಾವಿರ ಕೋ. ರೂ. ಗೂ ಹೆಚ್ಚು ಅನುದಾನವನ್ನು ಪರಿಶಿಷ್ಟರ ಏಳಿಗೆಗೆ ವಿನಿಯೋಗಿಸುತ್ತಿದೆ. ಪರಿಶಿಷ್ಟರ ವರ್ಗದ ಜನರು ಗುತ್ತಿಗೆ ಪಡೆಯಲು ಅನುಕೂಲವಾಗುವಂತೆ ಶೇ.24.1 ರಷ್ಟು ಮೀಸಲಾತಿ ಅವಕಾಶವನ್ನು ಸರಕಾರ ಕಲ್ಪಿಸಿದೆ ಎಂದರು.
ಸರಕಾರ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರವಲ್ಲ. ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಕೈಗೆತ್ತಿಕೊಳ್ಳುತ್ತಿದೆ. ಕಳೆದ 7 ವರ್ಷಗಳಿಂದ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಹೀಗಾಗಿ ಅಂತರ್ಜಲ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಚಾಮರಾಜನಗರ ತಾಲೂಕಿನಲ್ಲಿ 166 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸುವ ಸೇವೆಗೆ ಅಕ್ಟೋಬರ್ ತಿಂಗಳಲ್ಲಿ ಚಾಲನೆ ನೀಡಲಾಗುತ್ತದೆ. 5 ರೂ. ದರದಲ್ಲಿ ತಿಂಡಿ, 10 ರೂ. ದರದಲ್ಲಿ ಊಟ ಒದಗಿಸುವ ಇಂದಿರಾ ಕ್ಯಾಂಟೀನ್‌ಗಳನ್ನು ಬೆಂಗಳೂರು ನಗರದಲ್ಲಿ ಆರಂಭಿಸಿದೆ. ಮುಂದೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಆರಂಭಿಸಿದ್ದ ಜನಪರ ಕಾರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ನೆರವು ನೀಡುತ್ತಿದ್ದಾರೆ. ಶಾಸಕರು, ಸಂಸದರು ಸೇರಿದಂತೆ ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸಗಳು ರಾಜ್ಯದ್ಯಂತ ಸಮರೋಪಾದಿಯಲ್ಲಿ ಸಾಗುತ್ತಿವೆ ಎಂದರು.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ 11 ಕೆರೆಗಳಿಗೆ ನೀರು ತುಂಬಿಸುವ 53 ಕೋಟಿ ರೂ. ವೆಚ್ಚದ ಹುತ್ತೂರು ಯೋಜನೆ, ಗುಂಡ್ಲುಪೇಟೆ ತಾಲೂಕಿನ 4 ಕೆರೆಗಳಿಗೆ ನೀರು ತುಂಬಿಸುವ ರಾಘವಪುರ ಏತ ಯೋಜನೆ ಮಹದೇವ ಪ್ರಸಾದ್ ಅವರ ಕಳಕಳಿಯಾಗಿತ್ತು. ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಇನ್ನೂ ಕೆಲವು ಕೆರೆಗಳಿಗೆ ನೀರು ತುಂಬಿಸಬೇಕೆಂಬ ಬೇಡಿಕೆ ಬಂದಿದೆ, ನೀರಿನ ಲಭ್ಯತೆ ನೋಡಿಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಸಂಸದ ಧ್ರುವನಾರಾಯಣ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಗೂ ಹೆಚ್ಚು ಅನುದಾನವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. 71 ಕೆರೆಗಳಿಗೆ ನೀರು ತುಂಬಿಸಲು ಬೇಕಿರುವ ಹಣಕಾಸು ನೆರವು ನೀಡುತ್ತಿದ್ದಾರೆ, ಹನೂರು ಭಾಗದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾದರೆ ಎಲ್ಲ ಭಾಗಗಳಿಗೂ ಸಂಪೂರ್ಣವಾಗಿ ನೀರು ಒದಗಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಗೀತಾ ಮಹದೇವಪ್ರಸಾದ್ ಮಾತನಾಡಿ, ಪತಿ ಮಹದೇವಪ್ರಸಾದ್ ತಾಲೂಕಿನ ಗ್ರಾಮಗಳಿಗೆ ಶಾಶ್ವತ ನೀರು ಪೂರೈಸಬೇಕೆಂಬ ಮಹದಾಸೆಯಿಂದ ಆರಂಭಗೊಳಿಸಿದ್ದ ಯೋಜನೆಯು ಮುಖ್ಯಮಂತ್ರಿಯವರು, ಸಚಿವರು, ಲೋಕಸಭಾ ಸದಸ್ಯರು ಸೇರಿದಂತೆ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ. ಅದಕ್ಕಾಗಿ ತುಂಬು ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಈ ವೇಳೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಬಿಎಸ್‌ಎಫ್ ಸೇವೆಯಲ್ಲಿರುವ ಜಿಲ್ಲೆಯ ಶಿವಶಂಕರಪ್ಪ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಜಿಪಂ ಅಧ್ಯಕ್ಷ ಎಂ.ರಾಮಚಂದ್ರ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಆರ್.ನರೇಂದ್ರ, ಆರ್. ಧರ್ಮಸೇನ, ಕಳಲೆ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಅವರದ್ದು ಮನ್‌ಕೀ ಬಾತ್, ನಮ್ಮದು ಕಾಮ್‌ಕೀ ಬಾತ್
ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ 42 ಸಾವಿರ ಕೋಟಿ ರೂ. ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ 10 ಸಾವಿರ ಕೋ.ರೂ. ಸೇರಿದಂತೆ ಒಟ್ಟು 52 ಸಾವಿರ ಕೋ. ರೂ. ಸಾಲ ಇದೆ. ಈ ಪೈಕಿ ಕೇಂದ್ರ 42 ಸಾವಿರ ಕೋ. ರೂ. ಸಾಲ ಮನ್ನಾ ಮಾಡಲಿ, ನಾವು 10 ಸಾವಿರ ಕೋ. ರೂ. ಸಾಲ ಮನ್ನಾ ಮಾಡುತ್ತೇವೆಂದು ಪ್ರಧಾನಿ ಬಳಿ ಮನವಿ ಮಾಡಿದ್ದೆವು. ಆದರೆ ಪ್ರಧಾನಿಯಾಗಲಿ, ರಾಜ್ಯದ ಬಿಜೆಪಿ ಮುಖಂಡರಾಗಲಿ ಈ ಬಗ್ಗೆ ತುಟಿ ಬಿಚ್ಚಲಿಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ ರೈತರು ಮಾಡಿದ್ದ 8 ಸಾವಿರದ 165 ಕೋಟಿ ರೂ. ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡಿದ್ದೇನೆ. ನರೇಂದ್ರ ಮೋದಿಯವರದ್ದು ಮನ್‌ಕೀ ಬಾತ್ ಆದರೇ ನಮ್ಮದು ಕಾಮ್‌ಕೀ ಬಾತ್ ಎಂಬುದನ್ನು ಸಾಧಿಸಿ ತೊರಿಸಿದ್ದೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ







