ಕನ್ನಡಕ್ಕೆ ಆದ್ಯತೆ ನೀಡದ ಶಾಲೆಗಳ ಮಾನ್ಯತೆ ರದ್ದುಗೊಳಿಸಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಮಂಡ್ಯ, ಆ.30: ಕನ್ನಡವನ್ನು ಒಂದು ಭಾಷೆಯಾಗಿ ಕಲಿಸದ ಯಾವುದೇ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ಆಯಾ ಜಿಲ್ಲಾ ಶಿಕ್ಷಣಾಧಿಕಾರಿಗಳು ರದ್ದುಗೊಳಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮನವಿ ಮಾಡಿದರು.
ನಗರದ ಗಾಂಧಿ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರೌಢಶಾಲೆ ಕನ್ನಡ ಭಾಷಾ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಾಂಸ್ಕೃತಿ ಕ ಕ್ಷೇತ್ರವನ್ನು ಒಳಗೊಂಡರೂ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ತನ್ನದೇ ಆದ ಗುರಿಯಲ್ಲಿ ಸಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮತ್ತು ಚಾಮರಾಜನಗರ ಪ್ರದೇಶದಲ್ಲಿ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಕನ್ನಡದ ಅಭಿಮಾನ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಶಿಕ್ಷಕರು ಕನ್ನಡದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದು, ಆಧುನಿಕತೆಯ ಈ ದಿನಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೈಂಕರ್ಯಕ್ಕೆ ಹೆಚ್ಚಿನ ಶ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಕನ್ನಡ ಅಳಿಯುವ ಮೂಲಕ ಕನ್ನಡಿಗರ ಅವಸಾನ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
32 ವರ್ಷದ ಹಿಂದೆ ಮೊಬೈಲ್, ಕಂಪ್ಯೂಟರ್ ಸಾಫ್ಟ್‍ವೇರ್‍ಗಳ ಹೆಸರೇ ಇರಲಿಲ್ಲ. ಈಗ ಎಲ್ಲಾ ಕ್ಷೇತ್ರವನ್ನು ಕಂಪ್ಯೂಟರ್ ಆವರಿಸಿದೆ. ಈಗಿರುವಾಗ ಮಹಿಷಿ ಅವರ ವರದಿಯನ್ನು ಪರಿಷ್ಕರಿಸಲು ಸಮಿತಿಯನ್ನು ರಚಿಸಲಾಗಿದ್ದು, ಸದ್ಯದಲ್ಲೇ ಅದು ಕಾರ್ಯಗತಗೊಳ್ಳಲಿದೆ ಎಂದರು.
ರಾಜ್ಯದಾದ್ಯಂತ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸಲೇಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸಲೇಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಮುರುಳೀಧರ್, ಕಸಾಪ ಅಧ್ಯಕ್ಷ ರವಿಕುಮಾರ್, ಡಿಡಿಪಿಐ ಶಿವಮಾದಪ್ಪ, ವಿಷಯ ಪರಿವೀಕ್ಷಕ ಪುಟ್ಟಸ್ವಾಮಿ, ಲ.ನಾಗರಾಜ ಭೈರಿ, ದೇವೇಗೌಡ, ರವೀಶ್‍ಕುಮಾರ್, ರಾಮನಾಥ ಹೆಗ್ಡೆ ಉಪಸ್ಥಿತರಿದ್ದರು.







