ಸಂಸ್ಕರಣಾ ಘಟಕದ ಬಗ್ಗೆ ರೈತರು ಸೂಕ್ತ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ

ಮಂಡ್ಯ, ಆ.30: ರೈತರು ತಮ್ಮ ಬೆಳೆ ಬೆಳೆಯುವ ಸಂದರ್ಭದಲ್ಲಿ ಬೆಳೆಗೆ ಸೂಕ್ತ ಪೌಷ್ಟಿಕಾಂಶ, ನೀರಿನ ಗಳಿಕೆ, ಬಳಕೆ, ಉಳಿಕೆಯ ಸಂಬಂಧ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಬೇಕಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಭಿಪ್ರಾಯಿಸಿದರು.
ತಾಲೂಕಿನ ವಿ.ಸಿ.ಫಾರಂನ ಕೆ.ವಿ.ಕೆ. ಆವರಣದಲ್ಲಿ ನಡೆದ ಸಂಕಲ್ಪದಿಂದ ಸಿದ್ಧಿ- ನ್ಯೂ ಇಂಡಿಯಾ ಮಂಥನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆ ಬೆಳೆಯುವ ಸಂಬಂದ ಎಲ್ಲ ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ರೈತರ ದುಡಿಮೆಗೆ ತಕ್ಕಂತೆ ಬೆಳೆಗಳ ಬೆಲೆ ನಿಗದಿ ಪಡಿಸಬೇಕಾದ ಅಗತ್ಯತೆ ಇದೆ. ಕೊಯ್ಲೋತ್ತರ ನಷ್ಟ ನಿರ್ವಹಣೆ, ಸುಧಾರಿತ ಬೀಜ, ಸಂಸ್ಕರಣಾ ಘಟಕ ಇತ್ಯಾದಿಗಳ ಬಗ್ಗೆ ರೈತರು ಸೂಕ್ತ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ತೋಟಗಾರಿಕಾ ಬೆಳೆಗಳ ರಕ್ಷಣೆ, ಕಾಳುಗಳ ಬೆಳೆ ರಕ್ಷಣೆ ಸಂಬಂಧ ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳ ಸಂಶೋಧನೆ ನಿರಂತರವಾಗಿ ನಡೆಯುತ್ತಿದ್ದು, ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 130 ಕೋಟಿ ಜನರಿಗೆ 70 ಲಕ್ಷ ಟನ್ ಆಹಾರ ಉತ್ಪಾದಿಸಿ, ಸ್ವಾವಲಂಬಿ ಹಾಗು ಸ್ವಾಭಿಮಾನಿ ಜೀವನ ನೀಡುವ ಆಶ್ವಾಸನೆಯನ್ನು ಸರ್ಕಾರಗಳು ನೀಡುತ್ತಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಸರ್ಕಾರ ಕೃಷಿ ನೀತಿ ಅನುಷ್ಠಾನಕ್ಕೆ ತರಲು ಮುಂದಾಗಿಲ್ಲ, ಜಿಲ್ಲೆಯಲ್ಲಿ 7 ಲಕ್ಷ ಕುಟುಂಬಗಳು 1 ಎಕರೆ ಭೂಮಿಯನ್ನು ಹೊಂದಿರುವಂತಹ ಕುಟುಂಬಗಳಾಗಿವೆ. ಆದರೂ ಇಲ್ಲಿ ಕೃಷಿ ನೀತಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ, ಭೂಮಿ ಆಧಾರಿತ ಆದಾಯ ಖಾತ್ರಿ ಯೋಜನೆಯ ಕೃಷಿ ಪದ್ದತಿ ಸೃಷ್ಠಿಸಲು ಸರ್ಕಾರ ಇಚ್ಛಾಸಕ್ತಿ ತೋರುತ್ತಿಲ್ಲ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ದೇಶದಲ್ಲಿ 26 ಕೋಟಿ ಉದ್ಯೋಗ ಖಾಲಿ ಇವೆ. ಆದರೆ ಇದನ್ನು ಭರ್ತಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇಷ್ಟೆಲ್ಲ ಉದ್ಯೋಗಗಳು ಖಾಲಿ ಇದ್ದು, ಸರ್ಕಾರ ಉದ್ಯೋಗ ಭರ್ತಿ ಮಾಡಿ, ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಒತ್ತಾಯಿಸಿದರು.
ಈ ವೇಳೆ ಕೃಷಿ ವಿವಿ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಸಿ.ಶಂಕರಯ್ಯ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಕೆ.ಎಂ.ಬೀರಪ್ಪ, ಬೆಂಗಳೂರಿನ ಕೃತಂಅಸಂ ಸಂಸ್ಥೆಯ ನಿರ್ದೇಶಕ ಡಾ.ಶ್ರೀನಾಥದೀಕ್ಷಿತ್, ವಿ.ಸಿ.ಫಾರಂ ಕೃಷಿ ವಿವಿ ಡೀನ್ ಡಾ.ಟಿ.ಶಿವಶಂಕರ್, ಸಹಸಂಶೋಧನಾ ನಿರ್ದೇಶಕ ಡಾ.ಸಿ.ಆರ್.ರವಿಶಂಕರ್, ಕೆ.ವಿ.ಕೆ. ಕಾರ್ಯಕ್ರಮ ಸಂಯೋಜಕ ಡಾ.ರಂಗನಾಥ್, ಜಂಟಿ ಕೃಷಿ ನಿರ್ದೇಶಕಿ ಡಾ.ರಾಜಸುಲೋಚನಾ, ಸಹವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶ್, ಮುಖಂಡ ಯೋಗೇಶ್ ಇನ್ನಿತರರಿದ್ದರು.







