ಭೋಪಾಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದನಿಂದ ದಾಂಧಲೆ

ಭೋಪಾಲ್, ಆ. 30: ಇಕಾನಮಿ ಪ್ರಯಾಣಕ್ಕೆ ಬಲವಂತಪಡಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಶಿವಸೇನಾ ನಾಯಕ ರವೀಂದ್ರ ಗಾಯಕ್ವಾಡ್ ಹಲ್ಲೆ ನಡೆಸಿದ 5 ತಿಂಗಳ ಬಳಿಕ ಇದೇ ಕಾರಣಕ್ಕೆ ಭೋಪಾಲದ ರಾಜಾಭೋಜಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಬಿಜೆಪಿ ಸಂಸದ ದಾಂಧಲೆ ಎಬ್ಬಿಸಿದ್ದಾರೆ.
ಬ್ಯುಸಿನಸ್ ಕ್ಲಾಸ್ ಟಿಕೆಟ್ ಹೊಂದಿದ ಹೊರತಾಗಿಯೂ ವಿಮಾನದ ಇಕಾನಮಿ ವಿಭಾಗದಲ್ಲಿ ಆಸನ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಭಿಂದ್‌ನ ಬಿಜೆಪಿ ಸಂಸದ ಭಾಗೀರಥ್ ಪ್ರಸಾದ್ ದಾಂಧಲೆ ಎಬ್ಬಿಸಿದರು. ಕೂಡಲೇ ಏರ್ ಇಂಡಿಯಾದ ಸಿಬ್ಬಂದಿ ಪ್ರಸಾದ್ ಅವರ ಬೇಡಿಕೆ ಈಡೇರಿಸಿದ್ದರು. ಆನಂತರವೇ ಏರ್ ಇಂಡಿಯಾ ವಿಮಾನ 15 ನಿಮಿಷ ತಡವಾಗಿ ಹೊರಟಿತು.
ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ದಾಂಧಲೆ ಮಾಡಿರುವುದನ್ನು ಪ್ರಸಾದ್ ನಿರಾಕರಿಸಿದ್ದಾರೆ. ನಾನು ಓರ್ವ ಪ್ರಯಾಣಿಕನಾಗಿ ಪ್ರಶ್ನಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಬ್ಯುಸಿನಸ್ ಕ್ಲಾಸ್ ಟಿಕೆಟ್ ಇದ್ದರೂ ಇಕಾನಮಿ ಕ್ಲಾಸ್ ಬೋರ್ಡಿಂಗ್ ಪಾಸ್ ನೀಡಿರುವುದನ್ನು ಪ್ರಶ್ನಿಸುವುದು ನನ್ನ ಹಕ್ಕಲ್ಲವೆ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.





