ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಮಾಡಲು ಸಹಕರಿಸಿ: ಡಾ.ಸನತ್ ಕುಮಾರ್
ತುಮಕೂರು, ಆ.30: ತುಮಕೂರು ಜಿಲ್ಲೆಯಲ್ಲಿ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳು, ವೈದ್ಯರು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಜಿ.ಕೆ.ಕರೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಔಷಧ ಮಾರಾಟಗಾರರ ಸಂಘದ ಆಶ್ರಯದಲ್ಲಿ ಖಾಸಗಿ ವಲಯದ ಔಷಧ ವಿತರಕರಿಗೆ ಕ್ಷಯರೋಗದ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತಿದ್ದ ಅವರು, ಕೆಮ್ಮು,ಸಂಜೆವೇಳೆ ಜ್ವರ ಬರುವುದು,ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳು.ಈ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರು ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವಂತೆ ಅವರು ತಿಳಿಸಿದರು.
ಅಡಿಷನಲ್ ಡ್ರಗ್ ಕಂಟ್ರೋಲರು ಮಮತ ಮಾತನಾಡಿ, ಕ್ಷಯರೋಗ ಮಾತ್ರೆಗಳು ಹೆಚ್1 ಷೆಡ್ಯೂಲ್‍ನಲ್ಲಿ ಬರುವುದರಿಂದ ಔಷಧ ಮಾರಾಟಗಾರರು ಔಷಧಿ ದಾಸ್ತಾನು ದಾಖಲಾತಿಗಳು ಹಾಗೂ ರೋಗಿಗೆ ಚಿಕಿತ್ಸೆ ನೀಡಿದ ವಿವರಗಳನ್ನು ಕಡ್ಡಾಯವಾಗಿ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಗೆ ಪ್ರತಿ ತಿಂಗಳು ವರದಿ ಸಲ್ಲಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಖಾಸಗಿ ಔಷಧಿ ವಿತರಕರ ಸಂಘದ ಪದಾಧಿಕಾರಿಗಳಾದ ರಮೇಶ್ ಮತ್ತು ಮಂಜುನಾಥ್ ಹಾಜರಿದ್ದರು.





