ನಾಗಸಾಕಿ ಬಾಂಬ್‌ನಲ್ಲಿ ಬದುಕುಳಿದ ಪೋಸ್ಟ್‌ಮ್ಯಾನ್ ನಿಧನ
‘ಹಿಂದಿನಿಂದ ಬಂದ ಕಾಮನಬಿಲ್ಲಿನಂಥ ಬೆಳಕು ಸುಟ್ಟು ಹಾಕಿತು’

ಟೋಕಿಯೊ, ಆ. 30: ಮುಂಚೂಣಿಯ ಪರಮಾಣು ನಿಶ್ಶಸ್ತ್ರೀಕರಣ ಹೋರಾಟಗಾರ ಜಪಾನ್‌ನ ಸುಮಿತೆರು ತನಿಗುಚಿ ತನ್ನ 88ನೆ ವಯಸ್ಸಿನಲ್ಲಿ ಬುಧವಾರ ನಿಧನರಾಗಿದ್ದಾರೆ. ಪೋಸ್ಟ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತನಿಗುಚಿ, 1945ರಲ್ಲಿ ನಾಗಸಾಕಿಯ ಮೇಲೆ ಅಮೆರಿಕ ಅಣು ಬಾಂಬ್ ಹಾಕಿದಾಗ ಪತ್ರ ಬಟವಾಡೆಯಲ್ಲಿ ತೊಡಗಿದ್ದರು. ಅವರು ನಾಗಸಾಕಿಯ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್‌ನಿಂದಾಗಿ ಮೃತಪಟ್ಟರು ಎಂದು ‘ನಿಹೊನ್ ಹಿಡಂಕ್ಯೊ’ ಎಂಬ ಸಂಘಟನೆ ತಿಳಿಸಿದೆ.
‘ನಿಹೊನ್ ಹಿಡಂಕ್ಯೊ’ ನಾಗಸಾಕಿ ಮತ್ತು ಹಿರೋಶಿಮಗಳ ಮೇಲೆ ನಡೆದ ಪರಮಾಣು ಬಾಂಬ್ ದಾಳಿಗಳಲ್ಲಿ ಬದುಕುಳಿದವರನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ.
ಒಂದು ಕಾಲದಲ್ಲಿ ತನಿಗುಚಿ ನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧೆಯ ಮುಂಚೂಣಿಯಲ್ಲಿದ್ದರು.
ಎರಡನೆ ಮಹಾಯುದ್ಧದ ಮುಕ್ತಾಯದ ದಿನಗಳಲ್ಲಿ ಬಾಂಬ್ ದಾಳಿ ನಡೆದಾಗ ಅವರಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಆ ದಾಳಿಯಲ್ಲಿ ಅವರ ಬೆನ್ನು ಮತ್ತು ಎಡಗೈಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಆ ಗಾಯಗಳು ವಾಸಿಯಾಗಲು ಹಲವಾರು ವರ್ಷಗಳೇ ಬೇಕಾದವು.
ಸ್ಫೋಟ ನಡೆದಾಗ ಅವರು ಸ್ಫೋಟದ ಕೇಂದ್ರ ಬಿಂದುವಿನಿಂದ ಸುಮಾರು 1.8 ಕಿಲೋಮೀಟರ್ ದೂರದಲ್ಲಿ ಸೈಕಲ್‌ನಲ್ಲಿ ಪತ್ರ ಬಟವಾಡೆಗೆ ಹೋಗುತ್ತಿದ್ದರು.
ಮಾಂಸ ಉದುರುತ್ತಿದ್ದವು, ಕರುಳುಗಳು ನೇತಾಡುತ್ತಿದ್ದವು
‘‘ಒಮ್ಮಿಂದೊಮ್ಮೆಲೆ ನನ್ನ ಹಿಂದೆ ಕಾಮನಬಿಲ್ಲಿನಂಥ ಬೆಳಕನ್ನು ನೋಡಿದೆ. ಅದೇ ಸಂದರ್ಭದಲ್ಲಿ ಅತ್ಯಂತ ಶಕ್ತಿಶಾಲಿ ಸ್ಫೋಟವೊಂದು ಕೇಳಿತು. ಗಾಳಿಯಲ್ಲಿ ಹಾರಿದ ನಾನು ನೆಲಕ್ಕೆ ಬಿದ್ದೆ’’ ಎಂದು 2015ರಲ್ಲಿ ನಡೆದ ನಾಗಸಾಕಿ ಬಾಂಬ್ ದಾಳಿಯ ಸ್ಮರಣ ದಿನದ ಸಂದರ್ಭದಲ್ಲಿ ಅವರು ಹೇಳಿದ್ದರು.
‘‘ನಾನು ಎದ್ದಾಗ, ನನ್ನ ಎಡಗೈಯ ಚರ್ಮ ಹೆಗಲಿನಿಂದ ಬೆರಳುಗಳ ತುದಿವರೆಗೆ ನೇತಾಡುತ್ತಿತ್ತು. ನನ್ನ ಬೆನ್ನನ್ನು ಮುಟ್ಟಿದೆ. ಅಲ್ಲಿ ಬಟ್ಟೆ ಇರದಿರುವುದು ನನ್ನ ಗಮನಕ್ಕೆ ಬಂತು. ನನ್ನ ಇಡೀ ಕೈಯ ಇಡೀ ಚರ್ಮ ಸುಟ್ಟು ಹೋಗಿತ್ತು’’ ಎಂದರು.
‘‘ಕರ್ರಗಿನ ದೇಹಗಳನ್ನು ಕಂಡೆ, ಕುಸಿದ ಕಟ್ಟಡಗಳ ಒಳಗಿನಿಂದ ಸಹಾಯಕ್ಕಾಗಿ ಕರೆಯುವ ಧ್ವನಿಗಳನ್ನು ಕೇಳಿದೆ. ಮಾಂಸ ಉದುರುತ್ತಿದ್ದ ಮತ್ತು ಕರುಳುಗಳು ನೇತಾಡುತ್ತಿದ್ದ ಜನರನ್ನು ಕಂಡೆ... ಈ ಸ್ಥಳದಲ್ಲಿ ಬೆಂಕಿ ತಾಂಡವವಾಡುತ್ತಿತ್ತು. ಅದು ನರಕವೇ ಆಗಿತ್ತು’’.
ಅವರು ಬಾಂಬ್ ಸ್ಫೋಟದ ಕರಾಳತೆಯನ್ನು ಜಗತ್ತಿಗೆ ಸಾರಿದ ಮೊದಲ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಜಗತ್ತಿನಲ್ಲಿ ವ್ಯಾಪಕವಾಗಿ ಪ್ರಸಾರವಾದವು. ಮಾಂಸ ಕರಗಿ ಹೋದ ಅವರ ಇಡೀ ಬೆನ್ನು ಜಾಗತಿಕವಾಗಿ ಪ್ರಸಾರಿಸಲಾಯಿತು.







