ರೈತರು ಆರ್ಥಿಕವಾಗಿ ಸಬಲರಾಗಬೇಕು: ಪ್ರತಾಪ್ ಸಿಂಹ

ಮಡಿಕೇರಿ, ಆ.3 : ಕೃಷಿಕರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವತ್ತ ರೈತರು ಸಂಕಲ್ಪ ಮಾಡಬೇಕಿದೆ ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ಕರೆ ನೀಡಿದ್ದಾರೆ.
ಗೋಣಿಕೊಪ್ಪ ಬಳಿಯ ಅತ್ತೂರು ಗ್ರಾಮದ ಪಾಮ್ ವ್ಯಾಲಿನಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಬುಧವಾರ ನಡೆದ ನವಭಾರತ ಮಂಥನ ಸಂಕಲ್ಪದಿಂದ ಸಿದ್ಧಿ 2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಆದಾಯ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ನುಡಿದರು.
ನಿವೇಶನ, ವಸತಿ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಹೀಗೆ ಕನಿಷ್ಠ ಮೂಲ ಸೌಲಭ್ಯಗಳು ಪ್ರತಿಯೊಬ್ಬರಿಗೂ ಪ್ರತೀ ಗ್ರಾಮಕ್ಕೂ ತಲುಪಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿಯೊಬ್ಬ ರೈತರು ತಮ್ಮ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿಕೊಂಡು, ಅದಕ್ಕೆ ಬೇಕಾದ ಗೊಬ್ಬರವನ್ನು ಅಳವಡಿಸಿ ಕೃಷಿ ಬೆಳೆ ಪಡೆಯಬೇಕು. ಆ ನಿಟ್ಟಿನಲ್ಲಿ ಮಣ್ಣು ಪರೀಕ್ಷೆಯ ಗುರುತಿನ ಚೀಟಿಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕಿದೆ. ಎಂದರು.
ಸರ್ಕಾರ ರೈತರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮ ಜವಾಬ್ದಾರಿಯನ್ನು ತಿಳಿಯಬೇಕಿದೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಪ್ರತಾಪ್ ಸಿಂಹ ಹೇಳಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಅಧಿಕಾರಿ ವೀರೇಂದ್ರ ಕುಮಾರ್ ಮಾತನಾಡಿ, ನೀರಾವರಿ ಸಂಪನ್ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು, ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮುಖಾಂತರ ಉತ್ಪಾದಕತೆ ಹೆಚ್ಚಿಸುವುದು, ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹ ಸೌಲಭ್ಯವನ್ನು ಬಲಪಡಿಸುವುದು ಅಗತ್ಯವೆಂದರು.
ಈ ಸಂದರ್ಭದಲ್ಲಿ ನಬಾರ್ಡ್‍ನ ಮುಂಡಂಡ ಸಿ.ನಾಣಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್.ಗಿರೀಶ್, ಪಶುಪಾಲನಾ ಇಲಾಖೆಯ ಡಾ.ರಮೇಶ್, ಚೆಟ್ಟಳ್ಳಿ ತೋಟಗಾರಿಕಾ ಸಂಸ್ಥೆಯ ಅಧಿಕಾರಿ ದೊರೆ, ಕೃಷಿ ವಿಜ್ಞಾನ ಕೇಂದ್ರದ ಸಜು ಜಾರ್ಜ್ ಇತರರು ಇದ್ದರು. ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು.







