ಕಲಬುರ್ಗಿ ಹತ್ಯೆ ಸಂಬಂಧ ಬೇರೆ ಬೇರೆ ಹಂತದಲ್ಲಿ ತನಿಖೆ ನಡೆಯುತ್ತಿದೆ: ಹೇಮಂತ್ ನಿಂಬಾಳ್ಕರ್

ಚಿಕ್ಕಮಗಳೂರು, ಆ.30: ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಒಂದು ಹಂತದಲ್ಲಿ ಬಂದು ಸ್ಥಗಿತವಾಗಿಬಿಟ್ಟಿದೆ. ಫ್ಲೊರೆನ್ಸಿಕ್ ಸೈನ್ಸ್ ಪರಿಶೀಲನೆ ಸೇರಿದಂತೆ ಬೇರೆ ಬೇರೆ ಹಂತದಲ್ಲಿ ತನಿಖೆ ನಡೆಯುತ್ತಿದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ತಿಳಿಸಿದರು.
ಅವರು ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಮೇಲ್ವಿಚಾರಣಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಮಾದರಿಯಾದ ಪ್ರಯತ್ನಗಳನ್ನು ನಡೆಸಲಾಗಿದೆ. ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣಕ್ಕೂ ಇದಕ್ಕೂ ಸಾಮ್ಯತೆ ಕಂಡು ಬರುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೋಕ್ಸೊ ಅಪರಾಧಗಳು ಹಿಂದೆಯೂ ಸಂಭವಿಸುತ್ತಿದ್ದವು. ಆದರೆ ಅವು ಠಾಣೆಯಲ್ಲಿ ದಾಖಲಾಗುತ್ತಿರಲಿಲ್ಲ. ಆದರೆ ಈಗ ಗುಡಿಸಲಿನಲ್ಲಿ ವಾಸಿಸುವ ಸಾಮಾನ್ಯ ಜನರಲ್ಲೂ ಪೋಕ್ಸೋ ಕುರಿತು ಅರಿವು ಮೂಡಿದೆ. ಇದಕ್ಕೆ ಮಾಧ್ಯಮಗಳ ಕೊಡುಗೆ ದೊಡ್ಡದಿದೆ. ಇಂತಹ ಪ್ರಕರಣ ನಡೆದ ಕೂಡಲೇ ತಕ್ಷಣ ವರದಿಯಾಗುತ್ತಿದೆ. ಇದರಿಂದಾಗಿ ಜನರಲ್ಲಿ ಜಾಗೃತಿ ಉಂಟಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಅಪರಾಧ ಪ್ರಕರಣಗಳ ತನಿಖೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವ ವಿಚಾರದಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಅತ್ಯುತ್ತಮ ಎನಿಸಿಕೊಂಡಿದೆ. ಇದಕ್ಕಾಗಿ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿದೆ. ಸೈಬರ್ ಅಪ್ಲಿಕೇಷನ್ ಬಳಸಿ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಕಳೆದ 15 ವರ್ಷಗಳಿಂದ ಸಾಕಷ್ಟು ಶ್ರಮ ಹಾಕಿದ್ದೇವೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ ನಾಲ್ವರು ಕಂಪ್ಯೂಟರ್ ಪರಿಣಿತಿ ಹೊಂದಿದ ಪೇದೆಗಳಿರುವುದು ಹೆಮ್ಮೆಯ ಸಂಗತಿ. ಈ ಕಾರಣಕ್ಕೆ ಪೊಲೀಸ್ ಸೇವೆ ಬಹಳಷ್ಟು ಸಕಾಲವಾಗಲು ಸಾಧ್ಯವಾಗಿದೆ ಎಂದರು.
ಸೆ.7 ರಂದು ಬಿಜೆಪಿ ಯುವ ಮೋರ್ಚಾ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿ ಯಾರು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ನಿಯಮಗಳ ಪ್ರಕಾರ ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು. ಕಾನೂನು ಕೈಗೆತ್ತಿಕೊಂಡು ಸಂಘಟಿತ ಅಥವಾ ಅಸಂಘಟಿತ ಅಪರಾಧಗಳನ್ನು ನಡೆಸಿದರೆ ಪೊಲೀಸ್ ಇಲಾಖೆ ತಕ್ಕ ಉತ್ತರ ನೀಡುತ್ತದೆ. ಕಾನೂನು ಮೀರಿ ನಾನೇ ಕಾನೂನು ಎಂದು ತಿಳಿದುಕೊಂಡಿದ್ದರೆ ಕಾನೂನು ಚೌಕಟ್ಟಿನಲ್ಲೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿಕೆ ನೀಡಿದರು.
ಈ ವೇಳೆ ಎಸ್ಪಿ ಕೆ.ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಜಗದೀಶ್ ಉಪಸ್ಥಿತರಿದ್ದರು.
‘ಪೊಲೀಸ್ ಠಾಣೆಗಳಿಗೆ ತೆರಳಿ ಯಾರೇ ದೂರು ನೀಡಿದರೂ ಕೂಲಂಕುಶ ತನಿಖೆ ಮಾಡಿ ಎಫ್‍ಐಆರ್ ದಾಖಲಿಸಬೇಕು. ಈ ವಿಚಾರದಲ್ಲಿ ಚ್ಯುತಿ ಕಂಡುಬಂದರೆ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಅವರು, ಪೊಲೀಸ್ ಇಲಾಖೆ ಯಾರದ್ದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯಿಲ್ಲ. ಕಳ್ಳರು, ಗೂಂಡಾಗಳ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತದೆ. ಹಾಗೆಯೇ ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರೆ ಎಸ್ಪಿ ಕ್ರಮ ಕೈಗೊಳ್ಳುತ್ತಾರೆ. ಸಮಾಜ ಮಾತ್ರ ಸರಿಯಾಗಿರಬೇಕು. ಪೊಲೀಸರು ಹೇಗೆ ಬೇಕೋ ಹಾಗೆ ಇರಬಹುದು ಅನ್ನುವುದು ಒಪ್ಪುವಂತಹದ್ದಲ್ಲ’
:- ಹೇಮಂತ ನಿಂಬಾಳ್ಕರ್, ಪಶ್ಚಿಮ ವಲಯ ಪೊಲೀಸ್ ಮಹಾ ನಿರ್ದೇಶಕ.







