ಹವಾಮಾನಾಧಾರಿತ ಬೇಸಾಯ ಪದ್ದತಿ ಬಗ್ಗೆ ಅರಿವು ಮೂಡಿಸಿ: ಎಚ್.ಡಿ. ರೇವಣ್ಣ
.jpg)
ಹಾಸನ, ಆ.30: ಪ್ರಸಕ್ತ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬೇಸಾಯ ಪದ್ಧತಿ ಅಳವಡಿಕೆಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡಿ ಅವರ ಜೀವನ ಮಟ್ಟ ಸುಧಾರಣೆಗೆ ಇಲಾಖೆಗಳು ಸಹಕರಿಸಬೇಕು ಎಂದು ಶಾಸಕ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕಂದಲಿ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಶಾಂತಿಗ್ರಾಮ ಹೋಬಳಿಯ ದೊಡ್ಡ ಚಾಕನಹಳ್ಳಿಯಲ್ಲಿ ಏರ್ಪಡಿಸಿದ್ದ ನವಭಾರತ ಮಂಥನ ಸಂಕಲ್ಪ ನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಪುರಕವಾದ ಯೋಜನೆಗಳು ಅನುಷ್ಠಾನಗೊಳ್ಳಬೇಕು ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಗಾಣಿಕೆಗಳ ಬಗ್ಗೆ ತರಬೇತಿ ಹಾಗೂ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಆಗ ಗ್ರಾಮೀಣ ಜನರ ಬದುಕು ಹಸನಾಗುತ್ತದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನ ಸುಧಾರಿತ ಬೇಸಾಯ ಪದ್ಧತಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ರೈತರ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯುವಂತಾಗಬೇಕು, ಮಾರುಕಟ್ಟೆ ವ್ಯವಸ್ಥೆ ಬಲಪಡಿಸಬೇಕು, ವಿವಿಧ ಇಲಾಖೆಗಳು ಪೂರಕವಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಈ ವೇಳೆ ಬೆಂಗಳೂರಿನ ಕೃಷಿ ತಂತ್ರಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಂ.ಜಿ ಚಂದ್ರೇಗೌಡ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ರಾಜೇಶ್ ಗೌಡ ಅವರು ನವಭಾರತ ಮಂಥನ ಸಂಕಲ್ಪ ನಿಧಿ ಯೋಜನೆ ಹಾಗೂ ಅವರ ಅನುಷ್ಠಾನಕ್ಕೆ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಟಿ. ಸತೀಶ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್ ದೇವಕುಮಾರ್, ರೇಷ್ಮೇ ಇಲಾಖೆ ಉಪನಿರ್ದೇಶಕ ಹೆಚ್.ಡಿ. ನಂಜಯ್ಯ, ಪಶು ಪಾಲನಾ ಇಲಾಖೇಯ ಉಪನಿರ್ದೇಶಕ ಡಾ.ಕೆ.ಹೆಚ್. ವೀರಭದ್ರಯ್ಯ, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಚನ್ನಕೇಶವ, ಡಾ.ಮಂಜುನಾಥಸ್ವಾಮಿ, ಡಾ. ಶಿವಶಂಕರ್, ಡಾ.ಪಂಕಜ, ಡಾ.ಕಾಂತರಾಜ್ ಮತ್ತಿತರರು ಹಾಜರಿದ್ದರು.







