ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ವಶ
ಚಿಕ್ಕಮಗಳೂರು, ಆ.30: ಕೊಪ್ಪ ಅರಣ್ಯ ವಿಭಾಗದ ವ್ಯಾಪ್ತಿಯ ಚಿಕ್ಕಅಗ್ರಹಾರ ವಲಯದ ಕುದುರೆಗುಂಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಅರಣ್ಯ ಉತ್ಪನ್ನಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಳ್ಳುವ ಮೂಲಕ ಪ್ರಕರಣ ದಾಖಲಿಸಿದ್ದಾರೆ.
ಬಿಳಿ ಬಣ್ಣದ ಪಿಕಪ್ ವಾಹನವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕ ಅರಣ್ಯ ಕಾಯಿದೆ 1963 ರ ಸೆಕ್ಷನ್ 71(ಎ) ಪ್ರಕಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನರಸಿಂಹರಾಜಪುರ ಚಿಕ್ಕಗ್ರಹಾರದ ವಲಯ ಅರಣ್ಯಾಧಿಕಾರಿಗಳ ಮೂಲಕ ಈ ಪ್ರಾಧಿಕಾರದ ಮುಂದೆ ಹಾಜರು ಪಡೆಸಲಾಗಿದೆ.
ಈ ವಾಹನದ ನಿಜವಾದ ಮಾಲಕರು, ವಾರಸುದಾರರು ಯಾರಾದರೂ ಇದ್ದಲ್ಲಿ ಅಂತಹ ವ್ಯಕ್ತಿ ವಾಹನದ ಮಾಲೀಕತ್ವದ ದಾಖಲೆಗಳೊಂದಿಗೆ ವರದಿ ಪ್ರಕಟಗೊಂಡ 30 ದಿನಗಳೊಳಗೆ ಹಾಜರಾಗಿ ಅಹವಾಲು ಸಲ್ಲಿಸಬೇಕು. ವಾಹನದ ಮೇಲೆ ಇರುವ ತಮ್ಮ ಹಕ್ಕು ಬಾಧ್ಯತೆಗಳನ್ನು ರುಜುವಾತು ಪಡಿಸಬೇಕು. ಮಾಲೀಕರು, ಅವರ ವಾಹನವು ಅರಣ್ಯ ಅಪರಾಧದಲ್ಲಿ ಭಾಗಿಯಾಗಿಲ್ಲವೆಂದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ರುಜುವಾತು ಪಡಿಸಬೇಕು.
ನಿಗದಿತ ಅವಧಿಯೊಳಗೆ ಯಾವುದೇ ಅಹವಾಲು ಬಾರದಿದ್ದಲ್ಲಿ 1963ನೇ ಕರ್ನಾಟಕ ಅರಣ್ಯ ಕಾಯ್ದೆ 71(ಎ) ಮತ್ತು ತಿದ್ದುಪಡಿಯಾದ ಕಲಂನಡಿ ಈ ವಾಹನದ ಅಂತಿಮ ನೋಟೀಸು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







