ಬೆಳ್ತಂಗಡಿ: ಎಂಡೋ ಪೀಡಿತ ಬಾಲಕ ಮೃತ್ಯು
ಬೆಳ್ತಂಗಡಿ, ಆ. 30: ತಾಲೂಕಿನ ಬೆಳಾಲು ಗ್ರಾಮದ ನಿವಾಸಿ ಎಂಡೋ ಪೀಡಿತ ಬಾಲಕನೋರ್ವ ಬುಧವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೃತ ಬಾಲಕ ಗ್ರಾಮದ ಮೈರಾಜೆ ನಿವಾಸಿ ಪೂವಣಿಗೌಡ ಎಂಬವರ ಪುತ್ರ ಪ್ರಶಾಂತ್ (17) ಎಂದು ಗುರುತಿಸಲಾಗಿದೆ.
ಈತ ಎಂಡೋ ಪೀಡಿತನಾಗಿದ್ದು ಕಳೆದ ಹತ್ತು ವರ್ಷಗಳಿಂದ ಮಲಗಿದ್ದಲ್ಲಿಯೇ ಇದ್ದ. ಈತನ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ಬಂದು ಬುಧವಾರ ಮೃತಪಟ್ಟಿದ್ದಾನೆ.
ಈ ಕುಟುಂಬಕ್ಕೆ ಎಂಡೋ ಪೀಡಿತರಿಗೆ ಸರಕಾರದಿಂದ ನೀಡಲಾಗುವ ಮೂರು ಸಾವಿರ ಮಸಾಶನ ಬರುತ್ತಿದ್ದು ಇದರಿಂದಲೇ ಈ ಕುಂಟುಂಬ ಬದುಕನ್ನು ನಡೆಸುತ್ತಿತ್ತು. ಪೂವಣಿ ಗೌಡ, ಗಿರಿಜ ದಂಪತಿಗೆ ಎಂಡೋ ಪೀಡಿತ ಪ್ರಶಾಂತ ಏಕೈಕ ಪುತ್ರನಾಗಿದ್ದ. ಮಗನ ದುಸ್ಥಿತಿಯನ್ನು ಕಂಡು ತಂದೆ ಸಂಪೂರ್ಣ ಕುಗ್ಗಿ ಹೋಗಿದ್ದು ಪಾರ್ಶವಾಯು ಪೀಡಿತರಾಗಿ ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ತಾಯಿಯೊಬ್ಬರೇ ಎದ್ದು ನಡೆಯುವ ಸ್ಥಿತಿಯಲ್ಲಿದ್ದರು.
ಈಗಾಗಲೆ ಮಗನ ಚಿಕಿತ್ಸೆಗೆ ಕುಟುಂಬ ಸಾಕಷ್ಟು ಖರ್ಚು ಮಾಡಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ತಂದೆಯೂ ಮಲಗಿದ್ದಲ್ಲಿಯೇ ಇದ್ದು ಇದೀಗ ಕುಟುಂಬ ಬೀದಿಪಾಲಾಗುವ ಸ್ಥಿತಿಯಲ್ಲಿದೆ. ಸರಕಾರ ನೀಡಿದ ಭರವಸೆಯಂತೆ ಇವರ ನೆರವಿಗೆ ಸರಕಾರ ಬರಬೇಕಾದ ಅಗತ್ಯವಿದೆ ಎಂದು ಎಂಡೋ ವಿರೋಧಿ ಕೊಕ್ಕಡ ಹೋರಾಟಗಾರ ಶ್ರೀಧರ ಗೌಡ ತಿಳಿಸಿದ್ದಾರೆ.





