ರೈತರಿಗೆ ಬೆಳೆ ಪರಿಹಾರ ಹಣ ನೀಡಲು ಎಚ್.ಡಿ. ರೇವಣ್ಣ ಆಗ್ರಹ

ಹಾಸನ, ಆ.30: ರೈತರು ಬೆಳೆದ ಬಹುತೇಕ ಬೆಳೆಗಳು ನಾಶಹೊಂದಿ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರಕಾರ ಗಮನ ನೀಡಿ ಬೆಳೆ ಪರಿಹಾರ ಹಣ ನೀಡುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದಲ್ಲದೆ ನೀಡದಿದ್ದರೇ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೆಂಗು, ಅಡಕೆ, ಭತ್ತ, ರಾಗಿ ಸೇರಿಂದತೆ ಬಹಿತೇಕ ಎಲ್ಲಾ ಬೆಳೆಗಳು ನಾಶವಾಗಿದ್ದು, ಸರ್ಕಾರ ಕೂಡಲೇ ಪರಿಹಾರ ಹಣ ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಸರ್ಕಾರಕ್ಕೆ ಬೆಳೆ ನಾಶದ ಬಗ್ಗೆ ಮಾಹಿತಿ ನೀಡುವ ಅಧಿಕಾರಿಗಳು ಕೂಡ ರೈತರಿಗೆ ಮೋಸ ಮಾಡುತ್ತಿದ್ದಾರೆ ಜೆಡಿಎಸ್ ಪಕ್ಷದವರು ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರು.
ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಸಾಧಾರಣವಾಗಿ ಮಳೆಯಾಗುತ್ತಿದ್ದು, ಈಗಲೂ ಕೂಡ ಜಲಾಶಯದಿಂದ ನೀರು ಹರಿಸಲಾಗುತ್ತಿದೆ ಅಲ್ಲದೆ ಹೊಳೆÉಯಿಂದ ಪ್ರತಿನಿತ್ಯ 4 ರಿಂದ 5 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ, ಇದನ್ನು ತಡೆಯುವಲ್ಲಿ ಕೂಡ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ನಗರದಲ್ಲಿ ಮತ್ತೊಂದು ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾರಂಭಕ್ಕೆ ಸರ್ಕಾರಕ್ಕೆ ನಾವು ಒತ್ತಡ ಹೇರಲಾಗಿದ್ದು, ಸರ್ಕಾರ ಈಗಾಗಲೇ 4.98 ಕೋಟಿ ರೂ ಅನುಮೋದನೆ ನೀಡಿದ್ದು ಶೀಘ್ರದಲ್ಲೇ ವಿಜ್ಞಾನ,ವಾಣಿಜ್ಯ ಮತ್ತು ಕಲಾ ವಿಭಾಗವನ್ನು ಪ್ರತ್ಯೇಕವಾಗಿ ಪ್ರಾರಂಭಿಸಲಾಗುವುದು ಅಲ್ಲದೆ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿಗೆ ಕೂಡ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಗಬೇಕಾಗಿರುವ ರಸ್ತೆ,ರೈಲ್ವೆ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಅಲ್ಲದೇ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಜಿಲ್ಲೆಯಲ್ಲಿ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಜೊತೆಗೆ ಉಸ್ತುವಾರಿ ಸಚಿವರೊಂದಿಗೆ ಯಾವಾಗಲೂ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು ಇಂತಹ ಶಿಕ್ಷಕರಿಗೆ ಜನಮೆಚ್ಚಿದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರೇವಣ್ಣ ಗಂಭೀರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಎಪಿಎಂಸಿ ಅಧ್ಯಕ್ಷ ಲಕ್ಷ್ಮಣಗೌಡ ಇತರರು ಉಪಸ್ಥಿತರಿದ್ದರು.







