ಮ್ಯಾನ್ಮಾರ್‌ನಲ್ಲಿ ‘ಬಂಡುಕೋರರಿಂದ ಪೊಲೀಸ್ ಠಾಣೆಗಳ ಮೇಲೆ ದಾಳಿ’; ಸೇನೆಯಿಂದ ಪ್ರತೀಕಾರ
18,000 ರೊಹಿಂಗ್ಯರು ಬಾಂಗ್ಲಾಕ್ಕೆ ಪಲಾಯನ

ಢಾಕಾ (ಬಾಂಗ್ಲಾದೇಶ), ಆ. 30: ಮ್ಯಾನ್ಮಾರ್‌ನಲ್ಲಿ ಹೊಸದಾಗಿ ಹಿಂಸಾಚಾರ ಭುಗಿಲೆದ್ದ ಬಳಿಕ 18,000ಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ಆ ದೇಶವನ್ನು ತೊರೆದು, ಬಾಂಗ್ಲಾದೇಶಕ್ಕೆ ಗಡಿ ದಾಟಿ ಬಂದಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ (ಐಒಎಂ) ಬುಧವಾರ ತಿಳಿಸಿದೆ. ಅದೇ ವೇಳೆ, ನೂರಾರು ಮಂದಿ ಎರಡು ದೇಶಗಳ ಗಡಿಯಲ್ಲಿರುವ ‘ಯಾರಿಗೂ ಸೇರದ ಜಾಗ’ದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದಿದೆ.
ಮ್ಯಾನ್ಮಾರ್‌ನೊಂದಿಗಿನ ಬಾಂಗ್ಲಾದೇಶ ಗಡಿಯಲ್ಲಿರುವ ಕಾಕ್ಸ್‌ಬಝಾರ್‌ನಲ್ಲಿ ಐಒಎಂ ಕಚೇರಿ ಇದೆ. ಸಂಘಟನೆಯ ವಕ್ತಾರೆ ಸಂಜುಕ್ತಾ ಸಹಾನಿ ಈ ಹೊಸ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದಾರೆ.
ಅದೇ ವೇಳೆ, ರೊಹಿಂಗ್ಯ ಬಂಡುಕೋರರು ನಡೆಸಿರುವ ದಾಳಿಗಳಿಗಾಗಿ ಮ್ಯಾನ್ಮಾರ್ ಸೇನೆಯು ಗ್ರಾಮಗಳನ್ನು ಸುಟ್ಟುಹಾಕುವ ಹಾಗೂ ನಾಗರಿಕರ ಮೇಲೆ ಗುಂಡು ಹಾರಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಮಾನವಹಕ್ಕು ಸಂಘಟನೆಗಳು ಮತ್ತು ರೊಹಿಂಗ್ಯ ಪರ ಹೋರಾಟಗಾರರು ಆರೋಪಿಸಿದ್ದಾರೆ.
ಹಿಂಸಾಚಾರಕ್ಕೆ ರೊಹಿಂಗ್ಯ ಬಂಡುಕೋರರು ಕಾರಣ ಎಂಬುದಾಗಿ ಮ್ಯಾನ್ಮಾರ್ ಸರಕಾರ ಆರೋಪಿಸಿದೆ.
ಹಿಂಸಾಚಾರದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆ ರವಿವಾರದ ಮಟ್ಟಿಗೆ 96. ಆದರೆ ನಿಜವಾಗಿ ಸತ್ತವರ ಸಂಖ್ಯೆ ತುಂಬಾ ಹೆಚ್ಚಾಗಿರಬಹುದು ಎಂದು ಹೇಳಲಾಗಿದೆ.
ಮ್ಯಾನ್ಮಾರ್‌ನಲ್ಲಿರುವ ಸುಮಾರು 10 ಲಕ್ಷ ರೊಹಿಂಗ್ಯ ಮುಸ್ಲಿಮರ ಪೈಕಿ ಹೆಚ್ಚಿನವರು ರಖೈನ್ ರಾಜ್ಯದ ಉತ್ತರ ಭಾಗದಲ್ಲಿ ವಾಸಿಸುತ್ತಿದ್ದಾರೆ. ಬೌದ್ಧ ಪ್ರಾಬಲ್ಯದ ದೇಶದಲ್ಲಿ ಅವರು ಹಿಂಸಾಚಾರಕ್ಕೆ ಒಳಗಾಗಿದ್ದಾರೆ.
ಕಳೆದ ವಾರ, ರೊಹಿಂಗ್ಯ ಬಂಡುಕೋರರು ಪೊಲೀಸ್ ಠಾಣೆಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸರಕಾರಿ ಪಡೆಗಳು ಸೇಡು ತೀರಿಸುತ್ತಿವೆ.
ರೊಹಿಂಗ್ಯ ಬಿಕ್ಕಟ್ಟು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ ನಡುವಿನ ವಿವಾದವಲ್ಲ, ಅದು ಅಂತಾರಾಷ್ಟ್ರೀಯ ಬಿಕ್ಕಟ್ಟಾಗಿದೆ ಎಂದು ಸಹಾನಿ ಹೇಳಿದರು.
ಕಳೆದ ವರ್ಷದ ಅಕ್ಟೋಬರ್ ಒಂದರಿಂದ ಸುಮಾರು 87,000 ರೊಹಿಂಗ್ಯರು ಬಾಂಗ್ಲಾದೇಶ ಪ್ರವೇಶಿಸಿದ್ದಾರೆ ಹಾಗೂ ಈಗ ಕೇವಲ ಒಂದು ವಾರದಲ್ಲಿ ಹೊಸದಾಗಿ 18,000 ಮಂದಿ ಬಂದಿದ್ದಾರೆ ಎಂದು ಕಾಕ್ಸ್‌ಬಝಾರ್ ಜಿಲ್ಲೆಯ ಹಿರಿಯ ಸರಕಾರಿ ಅಧಿಕಾರಿ ಅಲಿ ಹುಸೈನ್ ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಇದರಿಂದಾಗಿ ತಮ್ಮ ಸಂಪನ್ಮೂಲಗಳ ಮೇಲೆ ತೀವ್ರ ಒತ್ತಡ ಬಿದ್ದಿದೆ ಎಂದು ಅವರು ಹೇಳಿದರು.
‘‘ಇಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಈಗಾಗಲೇ ಸರಕಾರದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದೇನೆ. ಇಲ್ಲಿ ತುಂಬಾ ಸಂಕೀರ್ಣ ಪರಿಸ್ಥಿತಿ ನೆಲೆಸಿದೆ’’ ಎಂದರು.
ದೋಣಿ ಮುಳುಗಿ ಹಲವರ ಸಾವು
ಇನ್ನೊಂದು ಬೆಳವಣಿಗೆಯಲ್ಲಿ, ರೊಹಿಂಗ್ಯ ಮುಸ್ಲಿಮರನ್ನು ಒಯ್ಯತ್ತಿದ್ದ ದೋಣಿಯೊಂದು ನಾಫ್ ನದಿಯಲ್ಲಿ ಮಗುಚಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದೋಣಿಯು ಬಂಗಾಳಕೊಲ್ಲಿಯ ಶಾ ಪೊರಿರ್ ದ್ವೀಪದ ಮೂಲಕ ಬಾಂಗ್ಲಾದೇಶ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಮುಳುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಾಲ್ಕು ಮೃತದೇಹಗಳನ್ನು ಮೇಲೆತ್ತಲಾಗಿದೆ ಹಾಗೂ ಹಲವಾರು ಮಂದಿ ನಾಪತ್ತೆಯಾಗಿರುವ ಸಾಧ್ಯತೆಯಿದೆ ಎಂದರು.
‘‘ದೋಣಿಯಲ್ಲಿ ಎಷ್ಟು ಜನರಿದ್ದರು ಎನ್ನುವುದು ನನಗೆ ಗೊತ್ತಿಲ್ಲ. ಶೋಧ ಕಾರ್ಯ ಮುಂದುವರಿಯುತ್ತಿದೆ’’ ಎಂದರು.







