ಗ್ಯಾಸ್ ಟ್ರಬಲ್? ಈ ಆಹಾರಗಳ ಬಗ್ಗೆ ಎಚ್ಚರಿಕೆಯಿರಲಿ
ಅನಿಯಂತ್ರಿತವಾಗಿ ಅಪಾನವಾಯು ಬಿಡುಗಡೆ ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ಮುಜುಗರವನ್ನುಂಟು ಮಾಡುವ ಪಚನ ಸಮಸ್ಯೆಯಾಗಿದೆ. ಆದರೆ ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಯಾರೂ ಇದಕ್ಕೆ ಹೊರತಲ್ಲ. ಎಲ್ಲರೂ ಈ ಮುಜುಗರ ಅನುಭವಿಸಿ ದವರೇ. ನಮ್ಮ ಕರುಳಿನಲ್ಲಿ ವಾಯು ಉತ್ಪಾದನೆಯಾಗುವುದನ್ನು ತಗ್ಗಿಸುವ ಆಹಾರ ಸೇವನೆಯೊಂದೇ ಈ ಮುಜುಗರದಿಂದ ಪಾರಾಗುವ ಮಾರ್ಗವಾಗಿದೆ ಎನ್ನಬಹುದು.
ಹೊಟ್ಟೆಯಲ್ಲಿ ವಾಯು ಸಂಗ್ರಹವಾಗಲು ಕಾರಣಗಳು ಹಲವಾರಿವೆ. ಅವಸರದಲ್ಲಿ ಆಹಾರ ತಿನ್ನುವಾಗ ಗಾಳಿಯನ್ನೂ ಸೇವಿಸುವುದು ಅಥವಾ ಜೀರ್ಣಗೊಳ್ಳದ ಆಹಾರವನ್ನು ದೊಡ್ಡಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಭೇದಿಸುವುದು ಇತ್ಯಾದಿಗಳು ಇವುಗಳಲ್ಲಿ ಸೇರಿವೆ. ಹೊಟ್ಟೆಯಲ್ಲಿ ವಾಯು ಉತ್ಪತ್ತಿಗೆ ಕಾರಣವಾಗುವ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಈರುಳ್ಳಿ:
ನಾವು ಸೇವಿಸುವ ಆಹಾರದಲ್ಲಿ ಈರುಳ್ಳಿಯ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾದರೆ ಅದು ಹೊಟ್ಟೆಯಲ್ಲಿ ವಾಯು ಉತ್ಪಾದನೆಯನ್ನು ತಗ್ಗಿಸುವುಲ್ಲಿ ನೆರವಾಗುತ್ತದೆ. ಈರುಳ್ಳಿಯು ಫ್ರುಕ್ಟೋಸ್ನಂತಹ ಸಕ್ಕರೆಯ ಗುಂಪನ್ನೊಳಗೊಂಡಿದ್ದು, ಇವುಗಳನ್ನು ಸಣ್ಣಕರುಳು ಪೂರ್ಣವಾಗಿ ಹೀರಿಕೊಳ್ಳುವುದಿಲ್ಲ. ಹೀಗಾಗಿ ಇವು ದೊಡ್ಡಕರುಳಿಗೆ ಸಾಗಿಸಲ್ಪಡುತ್ತವೆ. ಅಲ್ಲಿ ವಾಯು ಉತ್ಪನ್ನವಾಗುತ್ತದೆ ಮತ್ತು ಇದು ಪಚನ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ.
ಪಿಷ್ಟಯುಕ್ತ ಆಹಾರಗಳು:
ಅಕ್ಕಿ, ಪಾಸ್ತಾ ಮತ್ತು ಬ್ರೆಡ್ನಂತಹ ಪಿಷ್ಟಯುಕ್ತ ಆಹಾರಗಳು ಕರುಳಿನಲ್ಲಿ ವಾಯು ಸಂಗ್ರಹವಾಗಲು ಮುಖ್ಯ ಕಾರಣಗಳಾಗಿವೆ. ಇಂತಹ ಆಹಾರಗಳು ಬಹುಬೇಗನೆ ಸಕ್ಕರೆಯಾಗಿ ರೂಪಾಂತರಗೊಳ್ಳುತ್ತವೆ ಮತ್ತು ಇವುಗಳನ್ನು ಪೂರ್ಣವಾಗಿ ಹೀರಿಕೊಳ್ಳಲು ಸಣ್ಣಕರುಳಿಗೆ ಸಾಧ್ಯವಾಗದಿರಬಹುದು. ಹೀಗಾಗಿ ಡೊಡ್ಡಕರುಳನ್ನು ಸೇರುವ ಇವು ವಾಯು ಉತ್ಪಾದಿಸುವ ಬ್ಯಾಕ್ಟೀರಿಯಾಗಳ ಸೃಷ್ಟಿಗೆ ಕಾರಣವಾಗುತ್ತವೆ.
ಕಾಲಿಫ್ಲವರ್:
ಕಾಲಿಫ್ಲವರ್ ಅಥವಾ ಹೂಕೋಸಿನಷ್ಟು ಕೆಟ್ಟದ್ದು ಬೇರೊಂದಿಲ್ಲ. ಇದು ವಾಯುವನ್ನು ಉತ್ಪಾದಿಸುವ ಬ್ರಾಸಿಕೇಸೀ ಕುಟುಂಬಕ್ಕೆ ಸೇರಿದೆ. ಗಂಧಕದ ಸಂಯುಕ್ತಗಳು ಮತ್ತು ಒಲಿಗೊಸ್ಯಾಚರೈಡ್ಗಳನ್ನು ಸಮೃದ್ಧ ಪ್ರಮಾಣದಲ್ಲಿ ಹೊಂದಿರುವ ಹೂಕೋಸನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಅದು ದುರ್ಗಂಧಯುಕ್ತ ಅಪಾನವಾಯು ಬಿಡುಗಡೆ ಯಾಗುವಂತೆ ಮಾಡುತ್ತದೆ.
ಇಡೀ ಧಾನ್ಯಗಳು:
ಇಡೀ ಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಅವುಗಳನ್ನು ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಗೋದಿ ಮತ್ತು ಓಟ್(ತೋಕೆ ಗೋದಿ) ಕೂಡ ಇವುಗಳಲ್ಲಿ ಸೇರಿವೆ. ಇವು ಅತಿ ಹೆಚ್ಚು ಪ್ರಮಾಣದಲ್ಲಿ ನಾರನ್ನು ಹೊಂದಿದ್ದು, ಈ ನಾರು ಸಣ್ಣಕರುಳಿನಲ್ಲಿ ಜೀರ್ಣವಾಗುವುದು ತುಂಬ ಕಷ್ಟ. ಈ ಎಲ್ಲ ಧಾನ್ಯಗಳೂ ದೊಡ್ಡಕರುಳಿನಲ್ಲಿ ಒಡೆಯುತ್ತವೆ ಮತ್ತು ಇದು ವಾಯು ಉತ್ಪತ್ತಿಯಾಗಲು ಕಾರಣವಾಗುತ್ತವೆ.
ಡೇರಿ ಉತ್ಪನ್ನಗಳು:
ಡೇರಿ ಉತ್ಪನ್ನಗಳಲ್ಲಿರುವ ಲ್ಯಾಕ್ಟೋಸ್ ಹೊಟ್ಟೆಯಲ್ಲಿ ನಿಜವಾದ ತೊಂದರೆಗಳನ್ನು ಸೃಷ್ಟಿಸುವ ಖಳನಾಯಕನಾಗಿದೆ. ಲ್ಯಾಕ್ಟೋಸ್ ಹಾಲು ಮತ್ತು ಹೆಚ್ಚುಕಡಿಮೆ ಎಲ್ಲ ಡೇರಿ ಉತ್ಪನ್ನಗಳಲ್ಲಿರುವ ಒಂದು ಬಗೆಯ ಸಕ್ಕರೆಯಾಗಿದೆ. ಇದು ಜೀರ್ಣಗೊಳ್ಳಲು ಲ್ಯಾಕ್ಟೇಸ್ ಎಂಬ ಕಿಣ್ವ ಅಗತ್ಯವಾಗುತ್ತದೆ. ಕೆಲವು ಜನರಲ್ಲಿ ಈ ಕಿಣ್ವ ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ, ಹೀಗಾಗಿ ವಾಯು ಹುಟ್ಟಿಕೊಳ್ಳುತ್ತದೆ ಮತ್ತು ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಈ ಸಮಸ್ಯೆಯಿರುವವರು ಡೇರಿ ಉತ್ಪನ್ನಗಳನ್ನು ಸೇವಿಸುವ ಮುನ್ನ ಲ್ಯಾಕ್ಟೇಸ್ ಮಾತ್ರೆಯನ್ನು ತೆಗೆದುಕೊಳ್ಳಬಹುದಾಗಿದೆ.
ಬೇಳೆಗಳು:
ಬೇಳೆಗಳಲ್ಲಿ ನಾರಿನಂಶ, ಪ್ರೋಟಿನ್ಗಳು, ಕಾರ್ಬೊಹೈಡ್ರೇಟ್ಗಳು ಮತ್ತು ಖನಿಜಗಳು ಹೇರಳವಾಗಿವೆ. ಅಧಿಕ ನಾರಿನಂಶವನ್ನು ಸೇವಿಸಿ ಅಭ್ಯಾಸವಿಲ್ಲದವರಿಗೆ ಬೇಳೆಗಳ ಸೇವನೆ ವಾಯುಸಮಸ್ಯೆಯನ್ನುಂಟು ಮಾಡುತ್ತದೆ. ಬೇಳೆಗಳು ಕೆಲವು ಬಗೆಯ ಸಕ್ಕರೆಗಳನ್ನೂ ಒಳಗೊಂಡಿದ್ದು, ಇವು ಅಧಿಕ ವಾಯು ಉತ್ಪನ್ನವಾಗುವಂತೆ ಮಾಡುತ್ತವೆ. ಆದರೆ ಬೇಳೆಗಳನ್ನು ಮುನ್ನಾದಿನ ರಾತ್ರಿ ನೀರಿನಲ್ಲಿ ನೆನೆಸಿ ಆಹಾರದಲ್ಲಿ ಬಳಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಕಾರ್ಬೊನೇಟೆಡ್ ಪಾನೀಯಗಳು:
ಇವು ಕಾರ್ಬೊನೇಟ್ ಆಗಿರುವುದರಿಂದ ಮತ್ತು ಫ್ರುಕ್ಟೋಸ್ನ್ನು ಒಳಗೊಂಡಿರುವುದರಿಂದ ಕರುಳಿನಲ್ಲಿ ವಾಯು ಉತ್ಪತ್ತಿಯಾಗಲು ಕಾರಣವಾಗುತ್ತವೆ.