ಗಣೇಶೋತ್ಸವ, ಬಕ್ರೀದ್ ಪ್ರಯುಕ್ತ ಗಡಿ ಭಾಗದಲ್ಲಿ ತಪಾಸಣೆ

ಬಣಕಲ್, ಆ.31: ಗಣೇಶೋತ್ಸವ ಮತ್ತು ಬಕ್ರಿದ್ ಹಬ್ಬದ ಪ್ರಯುಕ್ತ ಮಲೆನಾಡಿನ ಮತ್ತು ಬಯಲು ಸೀಮೆಯ ಸೂಕ್ಷ್ಮ ಗಡಿಭಾಗದಲ್ಲಿ ಸೆ.2ರವರೆಗೆ ಶಾಂತಿಸೌಹಾರ್ಧತೆ ಕಾಪಾಡುವ ಹಿನ್ನಲೆಯಲ್ಲಿ ವಾಹನಗಳ ಮಾಹಿತಿ ಕಲೆ ಹಾಕಿ ಸೂಕ್ತ ತಪಾಸಣೆ ಮಾಡಲಾಗುವುದು ಎಂದು ಬಣಕಲ್ ಪೋಲಿಸ್ ಠಾಣಾಧಿಕಾರಿ ಮೂರ್ತಿ ತಿಳಿಸಿದ್ದಾರೆ.
ತಮ್ಮನ್ನು ಸಂಪರ್ಕಿಸಿದ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಶಾಂತಿ ಸೌಹಾರ್ಧತೆ ಕಾಪಾಡುವ ಹಿನ್ನಲೆಯಲ್ಲಿ ಹಾಗೂ ಬಕ್ರಿದ್ ಮತ್ತು ಗಣೇಶೋತ್ಸವದ ಪ್ರಯುಕ್ತ ಗಡಿಭಾಗದಲ್ಲಿ ಸೂಕ್ತ ಭದ್ರತೆ ಮಾಡಲಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗುತ್ತದೆ ಎಂದಿದ್ದಾರೆ.
ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್ ಮಾತನಾಡಿ, ಬಣಕಲ್ ಭಾಗದ ಕೊಟ್ಟಿಗೆಹಾರ, ಮೂಡಿಗೆರೆಯ ಗಡಿಭಾಗ ಜನ್ನಾಪುರ, ಕೊಲ್ಲಿಬೈಲು, ಬಿಳುಗುಳ, ಗೋಣಿಬೀಡು ಗಡಿಭಾಗ ಚೀಕನಹಳ್ಳಿಯಲ್ಲಿ ಪೋಲಿಸ್ ಚೌಕಿ ಹಾಕಲಾಗಿದೆ. ಬರುವ ವಾಹನಗಳ ಮಾಹಿತಿ ಕಲೆ ಹಾಕಿ ವಾಹನದಲ್ಲಿರುವವರ ಜನರ ಗಣತಿ ಹಾಗೂ ಪ್ರಯಾಣದ ಮಾಹಿತಿ ಪಡೆಯಲಾಗುತ್ತದೆ. ಹಬ್ಬಗಳ ಆಚರಣೆಗಳು ಶಾಂತಿ ಸೌಹಾರ್ಧತೆಯಲ್ಲಿ ನಡೆಯಬೇಕೆಂಬ ಹಿನ್ನಲೆಯಲ್ಲಿ ಪೋಲಿಸ್ ಅಧೀಕ್ಷಕರ ಆದೇಶದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ಸೆ.2 ವರೆಗೂ ಸೂಕ್ತ ತಪಾಸಣೆ ಮಾಡಿ ವಾಹನಗಳನ್ನು ಬಿಡಲಾಗುತ್ತದೆ. ಧಾರ್ಮಿಕ ಹಬ್ಬಗಳ ಹಿನ್ನಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗುರುವಾರ ಹೆಚ್ಚಿನ ಪೇದೆಗಳನ್ನು ನಿಯೋಜಿಸಲಾಗಿದೆ ಎಂದರು.
ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ಪ್ರವೇಶ ದ್ವಾರದಲ್ಲಿ ಪೋಲಿಸ್ ಚೌಕಿಗೆ ಡಿವೈಎಸ್‍ಪಿ ಶೇಖ್‍ಹುಸೇನ್, ಮೂಡಿಗೆರೆ ಪಿಎಸೈ ಎಂ.ರಫೀಕ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಲಿಸ್ ಚೌಕಿಯಲ್ಲಿ ಮುಖ್ಯ ಪೇದೆ ಮೋಹನ್‍ರಾಜಣ್ಣ, ಪೋಲಿಸ್ ಸಿಬ್ಬಂದಿ ಪಿ.ಎಸ್.ರಘು, ಸುರೇಶ್, ಗೃಹ ರಕ್ಷಕ ದಳದ ಈಶ್ವರೇಗೌಡ ಉಪಸ್ಥಿತರಿದ್ದರು.







