200 ಅಡಿ ಹೊರವರ್ತುಲ ರಸ್ತೆ ಯೋಜನೆ: ಪ್ರಾಧಿಕಾರದ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಶಿವಮೊಗ್ಗ, ಆ. 31: ನಗರದ ಹೊರವಲಯದಲ್ಲಿ ಹೊಸದಾಗಿ 200 ಅಡಿ ವಿಸ್ತೀರ್ಣದ ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆಯ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ನೀಡುವಂತೆ ಬೆಂಗಳೂರಿನ ಟೌನ್ ಪ್ಲ್ಯಾನಿಂಗ್ ವಿಭಾಗವು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಈ ಸೂಚನೆಯಂತೆ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾನ್, ಆಯುಕ್ತ ಮೂಕಪ್ಪ ಕರಭೀಮಣ್ಣವರ್ ನೇತೃತ್ವದಲ್ಲಿ ಪ್ರಾಧಿಕಾರದ ಅಧಿಕಾರಿಗಳ ತಂಡವು ಹೊರ ವರ್ತುಲ ರಸ್ತೆ ಹಾದು ಹೋಗುವ ಪ್ರದೇಶಗಳಲ್ಲಿ ಕೆಲ ಸ್ಥಳಗಳಿಗೆ ಖುದ್ದು ಭೇಟಿಯಿತ್ತು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿತು.
ಸೂಚನೆ: ಸರಿಸುಮಾರು 33 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣದ ರೂಪುರೇಷೆ ಸಿದ್ದಪಡಿಸಲಾಗಿದೆ. ಈಗಾಗಲೇ ಪ್ರಾಧಿಕಾರದ ಮಹಾಯೋಜನೆಯಡಿ ರಸ್ತೆ ಹಾದು ಹೋಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಬೇಕಾಗಿರುವುದರಿಂದ ಯೋಜನೆ ಇಲ್ಲಿಯವರೆಗೂ ಕಾರ್ಯಗತಗೊಂಡಿಲ್ಲ. ಭೂ ಸ್ವಾದೀನ ಪ್ರಕ್ರಿಯೆಯೂ ಆರಂಭವಾಗಿಲ್ಲ.
ಈ ಮೊದಲು ಪ್ರಾಧಿಕಾರದವತಿಯಿಂದಲೇ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಚಿಂತನೆ ನಡೆಸಲಾಗಿತ್ತು. ಆದರೆ ಆರ್ಥಿಕ ಹೊರೆಯಿಂದ ಅನುಷ್ಠಾನಕ್ಕೆ ಹಿಂದೇಟ ಹಾಕಲಾಗಿತ್ತು. ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಹಾಗೂ 13 ಕ್ಕೆ ಬೈಪಾಸ್ ರೀತಿಯಲ್ಲಿ ಸುಮಾರು 13 ಕಿ.ಮೀ. ನಷ್ಟು ಹೊರವರ್ತುಲ ರಸ್ತೆ ಅಭಿವೃದ್ಧಿಪಡಿಸಲು ನಿರ್ಧರಿಸಿತ್ತು.
ಉಳಿದ ಅರ್ಧ ಭಾಗದ ರಸ್ತೆ ನಿರ್ಮಾಣ ಕಾರ್ಯವನ್ನು ಪ್ರಾಧಿಕಾರದವತಿಯಿಂದ ಕೈಗೆತ್ತಿಕೊಳ್ಳುವ ಚಿಂತನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿಯೇ ಪ್ರಾಧಿಕಾರದ ಮೂಲಕ ರಸ್ತೆ ನಿರ್ಮಾಣ ಮಾಡಬೇಕಾದ ಸ್ಥಳದ ವಸ್ತುಸ್ಥಿತಿಯ ಅಧ್ಯಯನ ನಡೆಸಿ, ವರದಿ ನೀಡುವಂತೆ ಬೆಂಗಳೂರಿನ ಟೌನ್ ಪ್ಲ್ಯಾನಿಂಗ್ ವಿಭಾಗ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಎಲ್ಲಿಯವರೆಗೆ: ಪ್ರಥಮ ಹಂತವಾಗಿ ಮಲ್ಲಿಗೇನಹಳ್ಳಿಯ ಸಾಗರ ರಸ್ತೆಯಿಂದ ಕೋಟೆಗಂಗೂರು, ಮೋಜಪ್ಪನ ಹೊಸೂರು, ಬಸವನಗಂಗೂರು ಮೂಲಕ ಸವಳಂಗ ರಸ್ತೆಯವರೆಗಿನ ಹೊರ ವರ್ತುಲ ರಸ್ತೆಯನ್ನು ಪ್ರಾಧಿಕಾರದ ಮೂಲಕ ಅಭಿವೃದ್ಧಿಪಡಿಸುವ ಚಿಂತನೆಯಿದೆ. ಈ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಯಾವುದೇ ಅಡೆತಡೆಯಿಲ್ಲವಾಗಿದೆ. ರಸ್ತೆ ಹಾದು ಹೋಗುವ ಪ್ರದೇಶದ ಭೂ ಮಾಲಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.
'ಪ್ರಾಧಿಕಾರದ ಮೂಲಕ ಹೊರ ವರ್ತುಲ ರಸ್ತೆ ಅಭಿವೃದ್ದಿ ನಡೆಸುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಸಾಧಕ-ಬಾಧಕಗಳ ಪರಿಶೀಲನೆ ನಡೆಸಲಾಗುವುದು. ತದನಂತರವಷ್ಟೆ ಈ ಕುರಿತಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು.ಇಸ್ಮಾಯಿಲ್ ಖಾನ್, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
'ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ದಿ ಪಡಿಸಲು ನಿರ್ಧರಿಸಿರುವ ರಸ್ತೆ ಹೊರತುಪಡಿಸಿ, ಉಳಿದ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಇರುವ ಅಡೆತಡೆಗಳೇನು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಹಾದು ಹೋಗುವ ಕೆಲ ಸ್ಥಳಗಳಿಗೆ ಖುದ್ದು ಭೇಟಿಯಿತ್ತು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ'.ಮೂಕಪ್ಪ ಕರಭೀಮಣ್ಣವರ್ ,ಪ್ರಾಧಿಕಾರದ ಆಯುಕ್ತ







