ಹಜ್ ಯಾತ್ರಾರ್ಥಿಗಳ ಸೇವೆಗಾಗಿ 1,200 ಐಎಫ್‌ಎಫ್ ಸ್ವಯಂ ಸೇವಕರು

ಜಿದ್ದಾ, ಆ. 31: ಇಂಡಿಯಾ ಫ್ರೆಟರ್ನಿಟಿ ಫಾರಂ (ಐಎಫ್‌ಎಫ್), ಸೌದಿ ಅರೇಬಿಯಾ ಘಟಕವು ಹಜ್ಜಾಜ್‌ಗಳ ಸೇವೆಗಾಗಿ 1,200 ಸ್ವಯಂ ಸೇವಕರನ್ನು ನೇಮಿಸಿದೆ.
ವಿವಿಧ ರಾಜ್ಯಗಳ ಅನಿವಾಸಿ ಭಾರತೀಯರು ಈ ತಂಡದಲ್ಲಿದ್ದು, ಅವರು ತಮ್ಮ ಸ್ಥಳೀಯ ಭಾಷೆಯೊಂದಿಗೆ ಇಂಗ್ಲಿಷ್ ಮತ್ತು ಅರೇಬಿಕ್ ಮಾತನಾಡಬಲ್ಲ ವರಾಗಿದ್ದಾರೆ. ಮಕ್ಕಾದ ಅಝೀಝಿಯಾ, ಹಜ್ ಮಿಶನ್‌ನ ವೈದ್ಯಕೀಯ ಸೇವಾ ಸ್ಥಳಗಳು, ಅರಫಾದ ಮಶೈರ್ ರೈಲ್ವೆ ಸ್ಟೇಶನ್ ಮತ್ತು ಮೀನಾದ ಟೆಂಟ್ ಸಿಟಿಯಲ್ಲಿ ಐಎಫ್‌ಎಫ್ ಸ್ವಯಂ ಸೇವಕರು ಸೇವೆಯನ್ನು ಒದಗಿಸಲಿದ್ದಾರೆ.
ಹಜ್ ಯಾತ್ರಾರ್ಥಿಗಳಿಗೆ ತಮ್ಮ ಸ್ಥಳಗಳನ್ನು ಸೇರಲು, ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಮತ್ತು ವೀಲ್ ಚೆಯರ್‌ಗಳನ್ನು ಪಡೆಯಲು ನೆರವಾಗಲಿ ದ್ದಾರೆ. ಸುಲಭವಾಗಿ ಹಜ್ ನಿರ್ವಹಿಸಲು ಸ್ವಯಂ ಸೇವಕರು ಯಾತ್ರಾರ್ಥಿಗಳಿಗೆ ನೆರವಾಗಲಿದ್ದಾರೆ. ಮಕ್ಕಾ, ಅರಫಾ, ಮೀನಾ ಟೆಂಟ್ ಮತ್ತು ಮಿನಾ ಸಾರ್ವಜನಿಕ ಪ್ರದೇಶಗಳಲ್ಲಿ ಹಲವು ತಂಡಗಳಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಭಾರತದ ಹಜ್ ಯಾತ್ರಾರ್ಥಿಗಳ ಮೊದಲ ತಂಡವು ಇಲ್ಲಿಗೆ ತಲುಪುವುದರೊಂದಿಗೆ ಸ್ವಯಂ ಸೇವಕರು ಸೇವೆಯನ್ನು ಪ್ರಾರಂಭಿಸಿದ್ದಾರೆ. ಮಸ್ಜಿದುಲ್ ಹರಾಮ್ ಮತ್ತು ಅಝೀಝಿಯಾಗಳಲ್ಲಿ ಅವರು ಯಾತ್ರಾರ್ಥಿಗಳಿಗೆ ನೆರವಾಗುತ್ತಿದ್ದಾರೆ.
ಹಜ್ ಸ್ವಯಂ ಸೇವೆಯ ಮೇಲ್ವಿಚಾಯರಣೆಯನ್ನು ಮುಹಮ್ಮದ್ ಸಾದಿಕ್ (ಕೊ ಆರ್ಡಿನೇಟರ್) ಮುಹಮ್ಮದ್ ಅಲಿ (ಸಹಾಯಕ ಕೊಆರ್ಡಿನೇಟರ್), ಮುದಸ್ಸಿರ್ (ವಲಂಟಿಯರ್ ಕ್ಯಾಪ್ಟನ್), ಶಾಹುಲ್ ಹಮೀದ್ (ಅಸಿಸ್ಟೆಂಟ್ ಕ್ಯಾಪ್ಟೆನ್) ವಹಿಸಿದ್ದಾರೆ.
ಈ ಕುರಿತು ಜಿದ್ದಾದ ಐಎಫ್‌ಎಫ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮರ್ಕಝ್ ಅಲ್ ಅಹ್ಯಾದ ಕೊ ಆರ್ಡಿನೇಟರ್ ಮುಹಮ್ಮದ್ ಸಿದ್ದೀಕಿ, ಐಎಫ್‌ಎಫ್ ಪ್ರಾದೇಶಿಕ ಅಧ್ಯಕ್ಷ ಫಯಾಝುದ್ದೀನ್, ಪ್ರಾದೇಶಿಕ ಕಾರ್ಯದರ್ಶಿ ಶಮ್ಸುದ್ದೀನ್ ಕೆ.ಎಂ, ಮುಹಮ್ಮದ್ ಸಾದಿಕ್, ಉಮರ್ ಹುಸೈನ್ ಉಪಸ್ಥಿತರಿದ್ದರು ಎಂದು ಐಎಫ್ಎಫ್ ಜಿದ್ದಾ ಮಾಧ್ಯಮದ ವಕ್ತಾರ ಮುಹಮ್ಮದ್ ಅಲಿ ತಿಳಿಸಿದ್ದಾರೆ.







