ವೇಶ್ಯಾವಾಟಿಕೆ ದಂಧೆಕೋರರ ಮೇಲೆ ದಾಳಿ: ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡಿದರೆ ಕ್ರಮ; ಕೆ. ಅಣ್ಣಾಮಲೈ

ಚಿಕ್ಕಮಗಳೂರು, ಆ.31: ವೆಶ್ಯಾವಾಟಿಕೆ ದಂದೆ ಕುರಿತು ಪಂಚರಾಗಿದ್ದ ಸ್ಥಳದಲ್ಲಿದ್ದವರ ವಿರುದ್ಧ ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳು ಪ್ರಕರಣವಾಗುತ್ತಿವೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ ಕಾನೂನು ಕ್ರಮ ಜರಗಿಸಬೇಕಾಗುತ್ತದೆ ಎಂದು ಎಸ್ಪಿ ಕೆ.ಅಣ್ಣಾಮಲೈ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಬಸವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಎರಡು ದಿನಗಳ ಹಿಂದೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿ ಕೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು ಪ್ರಸಾರವಾಗುತ್ತಿದೆ.
ಪ್ರಕರಣಗಳಲ್ಲಿ ಪಂಚರಾದ ನಗರಸಭೆ ಮಾಜಿ ಸದಸ್ಯ ಎನ್.ಕೆ.ಮಧು, ಹಾಲಿ ನಗರಸಭೆ ಸದಸ್ಯರಾದ ಕೆ.ಬಾಲು ಮತ್ತು ಶ್ರೀಮತಿ ಸುರೇಖ ಸಂಪತ್ ರಾಜ್ ಬಗ್ಗೆ ತಪ್ಪು ಮಾಹಿತಿ ಬಿತ್ತರವಾಗುತ್ತಿದೆ. ಈ ಪಂಚರುಗಳು ವೇಶ್ಯಾವಾಟಿಕೆ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಪೊಲೀಸರ ಕೋರಿಕೆಯ ಮೇರೆಗೆ ಅವರುಗಳು ಪಂಚರಾಗಿ ತನಿಖೆಗಾಗಿ ಪೊಲೀಸರಿಗೆ ಸಹಕರಿಸಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮಾಧ್ಯಮವು ಪ್ರಮುಖ ಪಾತ್ರ ವಹಿಸಿದ್ದು, ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದರೇ, ಹಾಲಿ ಮಾಧ್ಯಮವು ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ಬಹಳಷ್ಟು ಅಪೂರ್ಣ ಮಾಹಿತಿಗಳನ್ನು ಪ್ರಸಾರ ಮಾಡುತ್ತಿದೆ ಎನ್ನಬೇಕಾಗುತ್ತಿದೆ. ಇಲ್ಲಿನ ಅಪೂರ್ಣ ಮಾಹಿತಿಗಳನ್ನು ಸ್ಪಲ್ಪ ಸಮಯದ ನಂತರ ಸಾರ್ವಜನಿಕರು ನಿಜವೆಂದು ಗ್ರಹಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವದ 4ನೇ ಆಧಾರ ಸ್ಥಂಭವಾಗಿರುವ ಮಾಧ್ಯಮ ವರ್ಗದವರನ್ನು ನಾನು ಬಹಳಷ್ಟು ಹತ್ತಿರ ಇಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೇ, ಈ ರೀತಿ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಿದ್ದಲ್ಲಿ, ಮಾಧ್ಯಮಗಳಿಗೆ ಪ್ರಕರಣಗಳ ಮಾಹಿತಿಗಳನ್ನು ನೀಡುವುದು ನಿಷ್ಪ್ರಯೋಜಕವಾಗಿದೆ.
ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಹಿತಾಶಕ್ತಿ ಕಾಪಾಡಿಕೊಳ್ಳುವ ಮೂಲಕ ಕೆಲಸ ನಿರ್ವಹಿಸುತ್ತಿದೆ. ಮೇಲ್ಕಂಡ ಪ್ರಕರಣಗಳಲ್ಲಿ ಪೊಲೀಸರಿಗೆ ಪಂಚರನ್ನಾಗಿ ಸಹಕರಿಸಿದ್ದವರ ವಿರುದ್ಧ ಪ್ರಸಾರ ಮಾಡಲಾಗಿರುವ ಸುಳ್ಳು ಮಾಹಿತಿಯ ಬಗ್ಗೆ ಅಥವಾ ಇನ್ನಿತರೇ ಯಾವುದೇ ರೀತಿಯ ವಿಷಯಗಳಿಗೆ ಸಂಬಂಧಪಟ್ಟ ಸುದ್ಧಿಗಳಲ್ಲಿ ಯಾವುದೇ ರೀತಿಯ ಸ್ಪಷ್ಟೀಕರಣ ಇದ್ದಲ್ಲಿ, ಮಾಧ್ಯಮ ವರ್ಗದವರು ನನ್ನೊಂದಿಗೆ ನೇರವಾಗಿ ವಾಟ್ಸ್‍ಆಪ್ ಗ್ರೂಪ್ ಮೂಲಕ ಸ್ಪಷ್ಟೀಕರಿಸಿಕೊಳ್ಳಬಹುದಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಮುಂದೆ ಇಂತಹ ರೀತಿಯಲ್ಲಿ ಸುಳ್ಳು ಮಾಹಿತಿಗಳನ್ನು ಯಾವುದೇ ರೀತಿಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಲ್ಲಿ, ಸಂಬಂಧಪಟ್ಟವರ ವಿರುದ್ಧ ಕಾನೂನಿನ ರೀತ್ಯಾ ಸೂಕ್ತ ಕ್ರಮವನ್ನು ಜರುಗಿಸಲಾಗುವುದು. ಮಾಧ್ಯಮ ವರ್ಗದವರೊಂದಿಗೆ ಅಂತರವನ್ನು ಇಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.







