ವರದಕ್ಷಿಣೆ ಕಿರುಕುಳ: ವಿವಾಹಿತ ಮಹಿಳೆ ಆತ್ಮಹತ್ಯೆ

ಚಿಕ್ಕಮಗಳೂರು, ಆ.31: ವರದಕ್ಷಿಣೆ ಕಿರುಕುಳ ತಾಳಲಾರದೆ ವಿವಾಯಿತ ಮಹಿಳೆಯೋರ್ವರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಸಮೀಪದ ಮೂಡಿಗೆರೆ ತಾಲೂಕಿನ ಬಣಕಲ್ ಚೆಕ್ ಪೋಸ್ಟ್ ಎಂಬಲ್ಲಿ ನಡೆದಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಣಕಲ್ ಚೆಕ್‍ಪೋಸ್ಟ್ ಬಳಿಯ ಸಬೀನಾ(27) ಆತ್ಮಹತ್ಯೆ ಮಾಡಿಕೊಂಡಿರುವ ವಿವಾಯಿತ ಮಹಿಳೆಯಾಗಿದ್ದು, ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಈಕೆಯನ್ನು ಕಳೆದ ಆರು ವರ್ಷಗಳ ಹಿಂದೆ ಜಾವಗಲ್ ಎಂಬಲ್ಲಿನ ಆರೀಫ ವುಲ್ಲಾ ಎಂಬಾನಿಗೆ ವಿವಾಹ ಮಾಡಿ ಕೊಡಲಾಗಿತ್ತು. ಮದುವೆ ಸಮಯದಲ್ಲಿ ಒಂದು ಲಕ್ಷ ರೂ. ನಗದು ಹಣ ಸಹಿತ ಚಿನ್ನಾಭರಣ ಸೇರಿ ಆರು ಲಕ್ಷ ರೂ.ಗಳ ವರದಕ್ಷಿಣೆಯನ್ನು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಈಕೆಯ ಪತಿ ಮಹಾಶಯ ಆರೀಫ್ ವುಲ್ಲಾನು ಪ್ರತಿನಿತ್ಯ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದು, ನೀನು ಮನೆ ಬಿಟ್ಟು ಹೋದರೆ ಚಿಕ್ಕಮ್ಮನ ಮಗಳಾದ ಸೈಯಿದಾ ಎಂಬವಳನ್ನು ಮದುವೆಯಾಗುವುದಾಗಿ ಕಿರುಕುಳ ನೀಡುತ್ತಿದ್ದ. ಆ.6ರಂದು ಆರೀಫ್‍ನ ತಾಯಿ ಹೃದಯಾಘಾತದಿಂದ ತೀರಿಕೊಂಡಿದ್ದು, ಅಂದು ಆರೀಫ್ ಸೇರಿದವರ ಎದುರು ಸಬೀನಾಳನ್ನು ತೀವ್ರವಾಗಿ ಬೆದರಿಸಿ ವರದಕ್ಷಿಣೆ ತಾರದಿದ್ದರೆ ಮನೆಗೆ ಬರಬಾರದು ಎಂದು ಅವಮಾನಿಸಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿಂಸೆಯಲ್ಲಿ ಆರೀಫ್, ಆತನ ಅಣ್ಣ ಇಸ್ಮಾಯೀಲ್, ಆತನ ಅತ್ತಿಗೆ ಸುರಯ್ಯಾ, ತಂಗಿ ಸಾಜೀದಾ ಮತ್ತು ಚಿಕ್ಕಮಮ್ಮನ ಮಗಳು ಸೈಯಿದಾ ಭಾಗೀದಾರಿಗಳಾಗಿದ್ದಾರೆ. ಇದರಿಂದ ಮನನೊಂದು ಸಬೀನಾಳು ಆ.17ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ತನ್ನ ತಂಗಿಯ ಪತಿ ಮುಕ್ತಿಯಾರ್ ಎಂಬವರಿಗೆ ಮೊಬೈಲ್ ಕರೆ ಮಾಡಿ ವಿಷ ತಿಳಿಸಿ ತನ್ನನ್ನು ಬದುಕಿಸುವಂತೆ ಹೇಳಿದ್ದಳು.
ತಕ್ಷಣ ಆಕೆಯನ್ನು ಮೂಡಿಗೆರೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂಧಿಸದೇ ಆಕೆ ಆ.29ರಂದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







