ಫಾದರ್ ಮುಲ್ಲರ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು, ಆ.31: ವಾಕ್ ಶ್ರವಣ ದೋಷಗಳನ್ನು ಬಾಲ್ಯಾವಸ್ಥೆಯಲ್ಲಿಯೇ ಗುರುತಿಸಿ ವೈದ್ಯಕೀಯ ಚಿಕಿತ್ಸೆ ಒದಗಿಸಿದರೆ ಕ್ರಮೇಣ ಅದನ್ನು ಗುಣ ಪಡಿಸಿ ಆ ವ್ಯಕ್ತಿಯನ್ನು ಸಾಮಾನ್ಯ ಮನುಷ್ಯನ ಹಂತಕ್ಕೆ ತರಬಹುದು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲ ಸಚಿವ ಪ್ರೊ. ಎ.ಎಂ. ಖಾನ್ ಹೇಳಿದರು.
‘ವಾಕ್ ಶ್ರವಣ ನ್ಯೂನತೆ ಇರುವವರ ಹಕ್ಕುಗಳಿಗೆ ಸಂಬಂಧಿಸಿದ ಪ್ರಸಕ್ತ ಒಲವುಗಳು’ ಎಂಬ ವಿಷಯದ ಕುರಿತು ಕಂಕನಾಡಿಯ ಫಾದರ್ ಮುಲ್ಲರ್ ಕಾಲೇಜ್ ಆ್ಯಂಡ್ ಸ್ಪೀಚ್ ಆ್ಯಂಡ್ ಹಿಯರಿಂಗ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಾಕ್ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸರಕಾರದಿಂದ ವಿವಿಧ ಸೌಲಭ್ಯಗಳು ಲಭಿಸುತ್ತಿದ್ದರೂ ಈ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ವಾಕ್ ಶ್ರವಣ ಸಮಸ್ಯೆಗಳು ಹೇಗೆ ಮತ್ತು ಏಕೆ ಬರುತ್ತಿವೆ, ಅವುಗಳಿಗೆ ಪರಿಹಾರ ಇದೆಯೇ ಎನ್ನುವ ಕುರಿತು ಜಾಗೃತಿ ಮೂಡಿಸುವ ಆವಶ್ಯಕತೆ ಇದೆ ಎಂದು ಪ್ರಿ. ಎಂ.ಎಂ. ಖಾನ್ ಹೇಳಿದರು.
ಮುಂಬೈಯ ಅಲಿ ಅಲಿವರ್ ಜಂಗ್ ಶ್ರವಣ ಸಂಸ್ಥೆಯ ನಿರ್ದೇಶಕ ಡಾ.ಎ.ಕೆ.ಸಿನ್ಹಾ ಮಾತನಾಡಿ ಕೇಂದ್ರ ಸರಕಾರವು 2016ರಲ್ಲಿ ವಾಕ್ ಶ್ರವಣ ನ್ಯೂನತೆ ಇರುವವರಿಗಾಗಿ ಪ್ರತ್ಯೇಕ ಹಕ್ಕನ್ನು ಒದಗಿಸಿದೆ. ಇದರಿಂದಾಗಿ ಅವರು ಸರಕಾರದಿಂದ ಹಲವಾರು ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ.ರಿಚಾರ್ಡ್ ಕುವೆಲ್ಲೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಾ.ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ರುಡಾಲ್ಫ್ ರವಿ ಡೇಸಾ, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಬಿ. ಸಂಜೀವ ರೈ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಫಾ.ಮುಲ್ಲರ್ ಕಾಲೇಜ್ ಆ್ಯಂಡ್ ಸ್ಪೀಚ್ ಆ್ಯಂಡ್ ಹಿಯರಿಂಗ್‌ನ ಪ್ರಾಂಶುಪಾಲ ಪ್ರೊ.ಅಖಿಲೇಶ್ ಪಿ.ಎಂ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಿ.ಸಿಂತಿಯಾ ಎಸ್. ವಂದಿಸಿದರು.







