ಸದಾ ಚಟುವಟಿಕೆಯಿಂದಿರಲು ಶುದ್ಧ ನೀರು, ಹಣ್ಣು-ಹಂಪಲು ತಿನ್ನಬೇಕು- ಶಾಸಕ ಸುರೇಶ್ ಗೌಡ
ತುಮಕೂರು, ಆ.31:ಶುದ್ಧ ಕುಡಿಯುವ ನೀರು, ಹಣ್ಣು-ಹಂಪಲುಗಳನ್ನು ಸೇವಿಸುವುದರಿಂದ ಇಡೀ ದಿನ ಚಟುವಟಿಕೆಯಿಂದ ಇರಬಹುದೆಂದು ಶಾಸಕ ಸುರೇಶ್‍ಗೌಡ ಸಲಹೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ವಟ್ಟಿಕುಟ್ಟಿ ಫೌಂಡೇಶನ್, ಇನಿಶಿಯೇಟಿವ್ಸ್ ಫಾರ್ ಡೆವಲಪ್‍ಮೆಂಟ್ ಫೌಂಡೇಶನ್, ಎಂ.ಎಸ್. ರಾಮಯ್ಯ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಾಗವಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ, ನೇತ್ರ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಕೇಂದ್ರ ಸರಕಾರ ರಾಜ್ಯದಲ್ಲಿ ಪ್ರಥಮ ಬಾರಿಗೆ ಯಾವುದೇ ಜಮೀನು ಹೊಂದಿಲ್ಲದ ಭೂ ರಹಿತರಿಗೆ 10ಸಾವಿರ ರೂ.ಗಳಿಂದ 1ಲಕ್ಷ ರೂ.ವರೆಗೆ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಸಾಲ ಒದಗಿಸಲು ಮುಂದಾಗಿದ್ದು, ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ವಿ. ರಂಗಸ್ವಾಮಿ ಮಾತನಾಡಿ, ಜನರು ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಸಾಲಿಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್ ಉಪ ಮಹಾಪ್ರಬಂಧಕ ಶಂಕರ್ ಕೊಟ್ಯಾನ್ ಬ್ಯಾಂಕಿನಿಂದ ರೈತರಿಗೆ ಸಿಗುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಶಿಬಿರದಲ್ಲಿ ಸುಮಾರು 350ಕ್ಕು ಹೆಚ್ಚು ಮಂದಿ ನೇತ್ರ ತಪಾಸಣೆ, ಕ್ಯಾನ್ಸರ್ ತಪಾಸಣೆ, ಸ್ತ್ರೀರೋಗ ಸಂಬಂಧ ತಪಾಸಣೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಟ್ಟಿಕುಟ್ಟಿ ಇಂಡಿಯಾ ಫೌಂಡೇಶನ್ ನಿರ್ದೇಶಕ ಸೋಸೆಫ್ ಮೇರಿ, ಮತ್ತಿತರರು ಉಪಸ್ಥಿತರಿದ್ದರು.







