ಬೆಂಗಳೂರು: ಯುವಕ ಆತ್ಮಹತ್ಯೆ

ಬೆಂಗಳೂರು, ಆ.31: ಪ್ರೀತಿಸುತ್ತಿದ್ದ ಯುವತಿ ಸಾವನ್ನಪ್ಪಿದ್ದರಿಂದ ನೊಂದು ಯುವಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೆಪಿ ಅಗ್ರಹಾರದ ಕಾರ್ಪೊರೇಷನ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಧಾಮಿನಿ(19) ಎಂಬಾಕೆ ಬುಧವಾರ ಸಂಜೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ಮೃತದೇಹವನ್ನು ಹೊರಗೆ ತಂದಿಟ್ಟಿರುವುದನ್ನು ನೋಡಿದ ಯುವಕ ಮಲ್ಲೇಶ್(25) ಬಿನ್ನಿಮಿಲ್‌ನ ಬಾಳೆಕಾಯಿ ಮಂಡಿ ಬಳಿ ತೆರಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಧಾಮಿನಿ, ಕಾರ್ಪೊರೇಷನ್ ವಸತಿ ಗೃಹದ ಬಳಿಯೇ ವಾಸಿಸುತ್ತಿದ್ದ ಮಲ್ಲೇಶ್‌ನನ್ನು ಪ್ರೀತಿ ಮಾಡುತ್ತಿರುವುದು ತಿಳಿದುಬಂದಿದೆ. ಬುಧವಾರ ಸಂಜೆ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಧಾಮಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಂಜೆ ಧಾಮಿನಿ ತಂದೆ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಹೊರತಂದು ಮಲಗಿಸಿದ್ದನ್ನು ಕಂಡ ಪ್ರಿಯಕರ ಮಲ್ಲೇಶ್ ನೊಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕೆಪಿ ಅಗ್ರಹಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







