ವಾರದೊಳಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವೆ: ಜಿ.ಪದ್ಮಾವತಿ

ಬೆಂಗಳೂರು, ಆ.31: ವಾರದೊಳಗೆ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದೆಂದು ಮೇಯರ್ ಜಿ.ಪದ್ಮಾವತಿ ಭರವಸೆ ನೀಡಿದ್ದಾರೆ.
ಗುರುವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್ ಮತ್ತು ಎನ್‌ಸಿಸಿ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಹಲವು ವರ್ಷಗಳಿಂದ ಮಹಾರಾಣಿ ಕಾಲೇಜು ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಕಾಲೇಜು ಪ್ರಾಚಾರ್ಯರು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಮೇಯರ್ ಪದ್ಮಾವತಿ, ಒಂದು ವಾರದಲ್ಲಿ ಕುಡಿಯುವ ನೀರಿನ ತೊಂದರೆ ಬಗೆಹರಿಸಲಾಗುವುದೆಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ಕನಸಿನ ಪ್ರಮುಖ ಘಟ್ಟವಾಗಿದೆ. ಅದು ಸತ್ಯವಾದ ಮಾತು. ಆ ದಿನಗಳು ಮತ್ತೆ ಸಿಗಲು ಸಾಧ್ಯವಿಲ್ಲ. ಅದಕ್ಕೆ ವಿದ್ಯಾರ್ಥಿಗಳು ಈ ದಿನಗಳಲ್ಲೆ ಸುಂದರ ಶಿಲ್ಪಿಗಳಾಗಬೇಕು. ಇಂದಿನ ವಿದ್ಯಾರ್ಥಿಗಳೆ ಮುಂದಿನ ಪ್ರಜೆಗಳು. ಭವ್ಯ ಭಾರತ ನಿರ್ಮಾಣಕ್ಕೆ ನಿಮ್ಮ ಕೊಡುಗೆ ಅಪಾರ ಎಂದು ಪದ್ಮಾವತಿ ನುಡಿದರು.
ನಟ ಗಣೇಶ್ ಮಾತನಾಡಿ, ಮಧ್ಯಮ ವರ್ಗದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಯಾವುದೇ ಕನಸು ಕಾಣಲು ಮಿತಿ ಇರುವುದಿಲ್ಲ. ನಾವು ಕಾಣುವ ಕನಸನ್ನು ನಮ್ಮಿಂದ ಮಾತ್ರ ಈಡೇರಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಸು ಕಟ್ಟಿಕೊಳ್ಳಬೇಕು. ಕನಸು ಈಡೇರಿಸಲು ಸತತ ಪ್ರಯತ್ನ ಅವಶ್ಯವಾಗಿದೆ. ನಾನು ನಿಮ್ಮಂತೆ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ರಿಝ್ವನ್ ಅರ್ಶದ್ ಮಾತನಾಡಿ, ಎಲ್ಲ ರಂಗಗಳಲ್ಲಿ ಮಹಿಳೆಯರ ಸಬಲೀಕರಣ ಆಗಬೇಕು. ರಾಜಕೀಯ ಸರಿಯಿಲ್ಲ ಎನ್ನುತ್ತಾರೆ. ಆದರೆ, ರಾಜಕೀಯ ಇಲ್ಲದಿದ್ದರೆ ದೇಶ ಮುನ್ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಯುವಕ-ಯುವತಿಯರು ರಾಜಕೀಯಕ್ಕೆ ಬರಬೇಕು. ರಾಜಕೀಯದಲ್ಲಿ ಯುವ ಪೀಳಿಗೆ ಪಾತ್ರ ಅವಶ್ಯವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ.ಆರ್.ಶಾಂತಕುಮಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಟಿ.ಜಿ.ಉಮಾ, ಶೋಭಾ ಬಿ.ಆರ್.ಲೀಲಾವತಿ, ರಾಧಮ್ಮ ಸೇರಿ ಪ್ರಮುಖರು ಹಾಜರಿದ್ದರು.







