ಪದವೀಧರರ ಪ್ರಮಾಣ ಶೇ.40ಕ್ಕೆ ಹೆಚ್ಚಿಸಲು ಕ್ರಮ: ಬಸವರಾಜರಾಯರೆಡ್ಡಿ

ಬೆಂಗಳೂರು, ಆ.31: ಮುಂದುವರೆದ ರಾಷ್ಟ್ರಗಳಂತೆ ನಮ್ಮ ದೇಶದಲ್ಲಿಯೂ ಪದವೀಧರರ ಸರಾಸರಿ ಪ್ರಮಾಣವನ್ನು ಮುಂದಿನ ದಶಕದೊಳಗೆ ಕನಿಷ್ಠ ಶೇ.40ಕ್ಕೆ ಹೆಚ್ಚಿಸಲು ಶ್ರಮಿಸಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಕರೆ ನೀಡಿದರು.
ಗುರುವಾರ ಕೆ.ಆರ್.ಪುರದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಜತ ಮಹೋತ್ಸವ(ಬೆಳ್ಳಿ ಹಬ್ಬ)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕೊರಿಯಾದಲ್ಲಿ 100 ಪದವಿ ವಿದ್ಯಾರ್ಥಿಗಳ ಪೈಕಿ 92, ಯೂರೋಪ್‌ನಲ್ಲಿ 82, ಅಮೆರಿಕದಲ್ಲಿ 80, ಚೀನಾದಲ್ಲಿ 45 ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿ 24ರಷ್ಟಿರುವ ಈ ಪ್ರಮಾಣವನ್ನು ಮುಂದಿನ ದಶಕದಲ್ಲಿ 40ಕ್ಕೆ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಸಾಕ್ಷರತೆಯ ಪ್ರಮಾಣವು ಶೇ.75.2ರಷ್ಟಿದ್ದರೆ, ನಮ್ಮ ರಾಜ್ಯದಲ್ಲಿ ಶೇ.75.6ರಷ್ಟಿದೆ. ಆರು ವರ್ಷದ ಮಕ್ಕಳು ಪ್ರಾಥಮಿಕ ಶಾಲೆಗಳಿಗೆ ದಾಖಲಾಗುವ ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿ 100ಕ್ಕೆ 94 ಇದ್ದರೆ, ನಮ್ಮ ರಾಜ್ಯದಲ್ಲಿ 96 ಇದೆ. ಆದರೆ, ಪ್ರೌಢಶಾಲೆ ಹಾಗೂ ಪಿಯುಸಿ ಮಟ್ಟದಲ್ಲಿ ಈ ಪ್ರಮಾಣವು ಶೇ.58ಕ್ಕೆ ಕುಸಿಯುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ವಿದ್ಯಾಕ್ಷೇತ್ರಕ್ಕೆ ನೀಡುತ್ತಿರುವ ಹೆಚ್ಚಿನ ಮಹತ್ವದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ, ಪುಸ್ತಕಗಳು ಸೇರಿದಂತೆ ಎಲ್ಲ ಸೌಲಭ್ಯ ನೀಡುತ್ತಿದ್ದೇವೆ. ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ರಾಜ್ಯದಲ್ಲಿ 412 ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಐದು ಸಾವಿರ ಕೋಟಿ ರೂ.ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೆ.ಆರ್.ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 8-10 ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ಖಾಲಿಯಿದ್ದ ಸುಮಾರು ಮೂರು ಸಾವಿರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. 600 ಪ್ರಾಧ್ಯಾಪಕರ ನೇಮಕಾತಿಗೆ ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ ಎಂದು ಬಸವರಾಜರಾಯರೆಡ್ಡಿ ಹೇಳಿದರು.
412 ಪ್ರಥಮ ದರ್ಜೆ ಕಾಲೇಜುಗಳಲ್ಲಿ 390 ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲ. ಇವರ ನೇಮಕಾತಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲು ಮುಖ್ಯಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ 200 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು ವಿವಿ ಆವರಣದಲ್ಲಿ ಪ್ರಾರಂಭವಾಗಿದೆ. ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೊದಲನೆ ವರ್ಷದ 1.90 ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನವೆಂಬರ್‌ನಲ್ಲಿ ನೀಡಲಾಗುವುದು ಎಂದು ಬಸವರಾಜರಾಯರೆಡ್ಡಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎ.ಬಸವರಾಜ ಮಾತನಾಡಿ, ಈ ಕಾಲೇಜು ಆರಂಭಿಸಲು ಅನೇಕ ಸಮಸ್ಯೆಗಳು ಎದುರಾದರೂ ಮಾಜಿ ಸಚಿವ ಎ.ಕೃಷ್ಣಪ್ಪ ದಿಟ್ಟವಾಗಿ ಅವುಗಳನ್ನು ಎದುರಿಸಿದರು. ಯಾರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ, ಪ್ರಗತಿಯತ್ತ ಸಾಗಿಸಿದ್ದಾರೊ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಈ ಮೈದಾನದಲ್ಲಿ 80 ಲಕ್ಷ ರೂ.ವೆಚ್ಚದಲ್ಲಿ ಶಾಶ್ವತ ಸಭಾಂಗಣವನ್ನು ನಿರ್ಮಿಸಲಾಗುವುದು. ಇದು ಸರಕಾರಿ ಕಾರ್ಯಕ್ರಮವಲ್ಲ, ನಮ್ಮ ಪಕ್ಷದ ಮುಖಂಡರು, ನಾಗರಿಕರು ಸ್ವಂತ ಖರ್ಚಿನಿಂದ ಇದನ್ನು ಆಯೋಜಿಸಿದ್ದೇವೆ. ನಮ್ಮ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಪ್ರಾಂಶುಪಾಲ ಡಾ.ಎಚ್.ಸಿ.ರಾಮಣ್ಣ, ಬಿಬಿಎಂಪಿ ಸದಸ್ಯರು, ಪ್ರೊ.ಡಿ.ರಾಜಣ್ಣ, ಡಾ.ನಾರಾಯಣ್, ಡಾ.ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







