ಮೂಡಬಿದ್ರೆಯಲ್ಲಿ ‘ಸದಾಭಿನಂದನೆ’ಯ ಅಂಗವಾಗಿ ರಾಜ್ಯಮಟ್ಟದ ಕುಸ್ತಿ ಪಂದ್ಯಾಟ
ಉಡುಪಿ, ಆ.31: ಮಂಗಳೂರಿನ ಕ್ರೀಡಾಪೋಷಕ ಎ.ಸದಾನಂದ ಶೆಟ್ಟಿ ‘ಸದಣ್ಣ’ ಇವರ 75ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌ನ ಆಶ್ರಯದಲ್ಲಿ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟವೊಂದು ಸೆ.1ರಂದು ಮೂಡಬಿದ್ರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆಯಲಿದೆ.
ಸದಾಭಿನಂದನೆ ಸಮಿತಿಯ ಗೌರವಾಧ್ಯಕ್ಷ ಕೆ.ಅಮರನಾಥ ಶೆಟ್ಟಿ ಅವರು ಇಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕುಸ್ತಿ ಪಂದ್ಯಾಟ ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಳ್ಳಲಿದೆ. 10 ಕ್ಕೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ 150ಕ್ಕೂ ಅಧಿಕ ಮಂದಿ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ.
ಪುರುಷರಲ್ಲಿ 45ಕೆ.ಜಿ., 55ಕೆ.ಜಿ., 65ಕೆ.ಜಿ., 75ಕೆ.ಜಿ., 85ಕೆ.ಜಿ. ಹಾಗೂ 85+ಕೆ.ಜಿ. ಹೀಗೆ ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕೊನೆಯ ಮೂರು ವಿಭಾಗಗಳ ಚಾಂಪಿಯನ್ ಕುಸ್ತಿ ಪಟುವಿಗೆ 15,000 ರೂ. ನಗದು ಬಹುಮಾನವಿದ್ದು, ಉಳಿದಂತೆ ಮೊದಲ ಬಹುಮಾನ 10,000 ರೂ., ದ್ವಿತೀಯ 7500ರೂ., ತೃತೀಯ 5000ರೂ. ಹಾಗೂ ಚತುರ್ಥ 5,000ರೂ. ನಗದು ಬಹುಮಾನವಿದೆ.
ಮಹಿಳೆಯರಲ್ಲಿ 45ಕೆ.ಜಿ., 50ಕೆ.ಜಿ., 58ಕೆ.ಜಿ., 63ಕೆ.ಜಿ. ಹಾಗೂ 63+ಕೆ.ಜಿ. ವಿಭಾಗಳಲ್ಲಿ ಸ್ಪರ್ಧೆಗಳಿದ್ದು, ವಿಜೇತರಿಗೆ ಕ್ರಮವಾಗಿ 7,500ರೂ., 5000, 3000, 3000ರೂ.ನಗದು ಬಹುಮಾನವಿದೆ.
ಸದಾಭಿನಂದನೆ: ಎ.ಸದಾನಂದ ಶೆಟ್ಟಿ ಅವರ 75ನೇ ಜನ್ಮದಿನೋತ್ಸವ ಸಮಾರಂಭ ‘ಸದಾಭಿನಂದನೆ’ ಸೆ.2ರಂದು ಮೂಡಬಿದರೆ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಬೆಳಗ್ಗೆ 9:30ರಿಂದ ಅಪರಾಹ್ನ 1:30ರವರೆಗೆ ನಡೆಯಲಿದೆ ಎಂದು ಅಮರನಾಥ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮವು ನಿಟ್ಟೆ ವಿದ್ಯಾಸಂಸ್ಥೆಗಳ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಮಿಜಾರುಗುತ್ತು ಆನಂದ ಆಳ್ವ ಅವರ ಹಿರಿತನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಖ್ಯಾತ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರ ಬಂಟರ ಸಂಕ್ಷಿಪ್ತ ಇತಿಹಾಸವನ್ನು ಹೊಂದಿರುವ ‘ಫುಟ್‌ಪ್ರಿಂಟ್’ ಆಂಗ್ಲ ಕೃತಿ ಬಿಡುಗಡೆಗೊಳ್ಳಲಿದೆ.
ಸಮಾರಂಭದಲ್ಲಿ ದೇಶ-ವಿದೇಶಗಳ ಗಣ್ಯರು, ಸಮಾಜಬಾಂಧವರು, ಸಾಧಕರು, ವಿವಿಧ ರಾಜಕೀಯ ನಾಯಕರು, ಸದಣ್ಣರ ಮಿತ್ರರು ಪಾಲ್ಗೊಳ್ಳಲಿದ್ದಾರೆ. ಡಾ.ಮೋಹನ ಆಳ್ವ ಗೌರವ ಸಂಪಾದಕತ್ವದಲ್ಲಿ, ಕದ್ರಿ ನವನೀತ್ ಶೆಟ್ಟಿ ಸಂಪಾದಕ್ವದಲ್ಲಿ ಅಭಿನಂದನಾ ಗ್ರಂಥವೂ ಬಿಡುಗಡೆಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಕದ್ರಿ ನವನೀತ್ ಶೆಟ್ಟಿ, ಉಡುಪಿ ಸಮಿತಿ ಸಂಚಾಲಕ ಇಂದ್ರಾಳಿ ಜಯಕರ ಶೆಟ್ಟಿ, ಕೇಂದ್ರ ಸಮಿತಿ ಸಂಚಾಲಕರಾದ ಪುಷ್ಪರಾಜ್ ಶೆಟ್ಟಿ ಹಾಗೂ ಎ.ಕೃಷ್ಣ ಶೆಟ್ಟಿ ತಾರೆಮಾರ್ ಉಪಸ್ಥಿತರಿದ್ದರು.







