ರೈತರ ಆತ್ಮಹತ್ಯೆ ಹೊಣೆ ಸರಕಾರ ಹೊರಬೇಕು:ಯಡಿಯೂರಪ್ಪ

ಬೆಂಗಳೂರು, ಆ.31: ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತನ ಸಾವಿನ ಹೊಣೆಯನ್ನು ಸರಕಾರ ಹೊರಬೇಕು. ಹಾಗೂ ಮೃತನ ಕುಟುಂಬಕ್ಕೆ 10ಲಕ್ಷ ರೂ.ಪರಿಹಾರ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಲಾಪುರದಲ್ಲಿ ಹಾದು ಹೋಗಿರುವ ಹೇಮಾವತಿ ನಾಲೆಯ ತೂಬು ಮುಚ್ಚಲು ಪೊಲೀಸರು ಮುಂದಾಗಿದ್ದನ್ನು ಪ್ರತಿಭಟಿಸಿ ರೈತ ಚಲುವರಾಜು(35) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.
ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಸಮಕ್ಷಮದಲ್ಲೇ ರೈತ ಮುಳುಗುತ್ತಿದ್ದರೂ ರಕ್ಷಿಸುವ ಪ್ರ್ರಯತ್ನ ಯಾರು ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಹೀಗಾಗಿ ಘಟನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಸರಕಾರ ಹೊರಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸಚಿವರೊಬ್ಬರು 400 ಎಕರೆಗೂ ಹೆಚ್ಚಿನ ಸರಕಾರಿ ಜಮೀನು ಕಬಳಿಸಿ ಜನರನ್ನು ವಂಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಇಷ್ಟರಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್‌ನ ಅವ್ಯವಹಾರ ಪ್ರಕರಣಗಳನ್ನು ಒಂದೊಂದಾಗಿ ಬಯಲಿಗೆಳೆಯುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.







