‘ಬ್ಲೂ ವೇಲ್ ಚಾಲೆಂಜ್’ ಸೂತ್ರಧಾರಿ 17 ವರ್ಷದ ರಶ್ಯ ಬಾಲಕಿ ಬಂಧನ

ಮಾಸ್ಕೊ, ಆ. 31: ಹದಿಹರಯದವರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ‘ಬ್ಲೂ ವೇಲ್ ಚಾಲೆಂಜ್’ ಇಂಟರ್‌ನೆಟ್ ಆಟದ ರೂವಾರಿಯೆಂದು ಹೇಳಲಾದ 17 ವರ್ಷದ ರಶ್ಯ ಬಾಲಕಿಯೊಬ್ಬಳನ್ನು ಬಂಧಿಸಲಾಗಿದೆ.
‘ಬ್ಲೂ ವೇಲ್ ಚಾಲೆಂಜ್’ ಆಟದ ಬಲೆಗೆ ಬಿದ್ದವರು ತಮಗೆ ನೀಡಲಾಗಿರುವ ಕೆಲಸ (ಟಾಸ್ಕ್)ಗಳನ್ನು ಪೂರ್ಣಗೊಳಿಸದಿದ್ದರೆ, ಅವರನ್ನು ಅಥವಾ ಅವರ ಕುಟುಂಬಿಕರನ್ನು ಕೊಲೆಗೈಯುವುದಾಗಿ ಬಂಧಿತ ಬಾಲಕಿ ಬೆದರಿಕೆಯೊಡ್ಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ರಶ್ಯದ ಪೂರ್ವದ ಅಂಚಿನಲ್ಲಿರುವ ಬಾಲಕಿಯ ಮನೆಯ ಮೇಲೆ ನಡೆಸಿದ ದಾಳಿಯ ವೀಡಿಯೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಮನೆಯಲ್ಲಿ ರಶ್ಯದ ಮನಶ್ಶಾಸ್ತ್ರ ವಿದ್ಯಾರ್ಥಿ ಫಿಲಿಪ್ ಬುಡೇಕಿನ್‌ನ ಚಿತ್ರ ಪತ್ತೆಯಾಗಿದೆ. ಈ ‘ಆಟವನ್ನು’ ಸಂಶೋಧಿಸಿದ್ದು ತಾನೆಂದು ಒಪ್ಪಿಕೊಂಡಿರುವ ಫಿಲಿಪ್‌ನಿಗೆ ರಶ್ಯದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ರಶ್ಯ ಪೊಲೀಸರು ಹೇಳುವಂತೆ, ಈ 17 ವರ್ಷದ ಬಾಲಕಿ ಈ ‘ಆಟ’ವನ್ನು ಆಡಲು ಆರಂಭಿಸಿದಳಾದರೂ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಅದನ್ನು ಪೂರ್ಣಗೊಳಿಸಲಿಲ್ಲ. ಬದಲಿಗೆ, ವೆಬ್‌ಸೈಟ್‌ನಲ್ಲಿ ಅಡ್ಮಿನಿಸ್ಟ್ರೇಟರ್ ಆಗಿ ಬದಲಾದ ಆಕೆ ಟಾಸ್ಕ್‌ಗಳನ್ನು ಪೂರ್ಣಗೊಳಿಸುವಂತೆ ಇತರರನ್ನು ಬೆದರಿಸುವ ಕೆಲಸ ಆರಂಭಿಸಿದಳು.
ಭಯಾನಕ ಚಾಲೆಂಜ್!
ಬದುಕಿನಲ್ಲಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವರು ಹಾಗೂ ತಮ್ಮ ಆತ್ಮಹತ್ಯೆಯನ್ನು ‘ರೋಮಾಂಚಕ ಆಟ’ವನ್ನಾಗಿಸಲು ಬಯಸುವವರನ್ನು ‘ಬ್ಲೂ ವೇಲ್ ಚಾಲೆಂಜ್’ ಗುರಿಯಾಗಿಸುತ್ತದೆ.
ಈ ಆಟಕ್ಕೆ ನೋಂದಾಯಿಸಿದ ಬಳಿಕ, ‘ಆಟಗಾರ’ರಿಗೆ 50 ದಿನಗಳ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ತಮಗೆ ತಾವೇ ಹಾನಿಗೊಳಿಸುವುದು, ಒಬ್ಬಂಟಿಯಾಗಿ ಭಯಾನಕ ಸಿನೆಮಾಗಳನ್ನು ನೋಡುವುದು, ತಮ್ಮ ಕೈಯಲ್ಲಿ ತಿಮಿಂಗಿಲದ ಚಿತ್ರವನ್ನು ಬಿಡಿಸುವುದು- ಮುಂತಾದುವು ಟಾಸ್ಕ್‌ಗಳಲ್ಲಿ ಒಳಗೊಂಡಿವೆ.
ಆಟಗಾರರ 50ನೆ ದಿನದ ಕೊನೆಯ ಟಾಸ್ಕ್ ತಮ್ಮನ್ನು ತಾವೇ ಕೊಲ್ಲುವುದು.
ಜಗತ್ತಿನಾದ್ಯಂತ 130ಕ್ಕೂ ಅಧಿಕ ಮಂದಿ ‘ಬ್ಲೂ ವೇಲ್ ಚಾಲೆಂಜ್’ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.







