ಗುರ್ಮೀತ್ ಬೆಂಬಲಿಗರ ಹಿಂಸಾಚಾರದಿಂದ ಹರ್ಯಾಣ ರಸ್ತೆ ಸಾರಿಗೆ ಸಂಸ್ಥೆಗೆ 14 ಕೋ.ರೂ.ನಷ್ಟ

ಚಂಡೀಗಡ, ಆ.31: ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮೀತ್ ಸಿಂಗ್‌ಗೆ ಶಿಕ್ಷೆ ವಿಧಿಸುವ ಮೊದಲು ಹಾಗೂ ಬಳಿಕದ ಘಟನೆಗಳಿಂದ ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸುಮಾರು 14 ಕೋಟಿ ರೂ.ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಶಿಕ್ಷೆ ಘೋಷಿಸುವ ಮೊದಲು ಹಾಗೂ ಬಳಿಕ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಸಿದ್ದ ಕಾರಣ ಹಲವು ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಈಗ ಡೇರಾ ಸಚ್ಚಾ ಸೌದದ ಕೇಂದ್ರ ಕಚೇರಿಯಿರುವ ಸಿರ್ಸಾ ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿ ಬಸ್ಸು ಸಂಚಾರ ಆರಂಭಿಸಲಾಗಿದೆ ಎಂದು ಹರ್ಯಾಣ ಸಾರಿಗೆ ಸಚಿವ ಕೃಷನ್‌ಲಾಲ್ ಪನ್ವರ್ ತಿಳಿಸಿದ್ದಾರೆ.
ಹಿಂಸಾಚಾರದ ಸಂದರ್ಭ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಅಥವಾ ಇನ್ಯಾವುದೇ ಬಸ್ಸುಗಳಿಗೆ ಹಾನಿಯಾಗಿಲ್ಲ ಎಂದ ಸಚಿವರು, ಗುರ್ಮೀತ್ಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಒದಗಿಸಲಾಗಿಲ್ಲ. ಆತನನ್ನು ಓರ್ವ ಸಾಮಾನ್ಯ ಖೈದಿಯಂತೆ ಪರಿಗಣಿಸಲಾಗಿದೆ . ಜೈಲಿನಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು. ಪನ್ವರ್ ಬಂದೀಖಾನೆ ಇಲಾಖೆಯ ಸಚಿವರೂ ಆಗಿದ್ದಾರೆ.





