ಪ್ರಧಾನಿ ಮೋದಿ ಕ್ಷಮೆಯಾಚನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಆಗ್ರಹ
‘ನೋಟುಗಳ ಅಮಾನ್ಯೀಕರಣ ವ್ಯರ್ಥ’

ಬೆಂಗಳೂರು, ಆ.31: ನೋಟುಗಳ ಅಮಾನ್ಯೀಕರಣದ ಉದ್ದೇಶ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆಗ್ರಹಿಸಿದರು.
ಸರ್ಜಿಕಲ್ ಸ್ಟ್ರೈಕ್, ನೋಟುಗಳ ಅಮಾನ್ಯೀಕರಣದಿಂದ ಯಾವ ಪ್ರಯೋಜನವು ಆಗಿಲ್ಲ. ಡಿಜಿಟಲ್ ಕರೆಸ್ಸಿ, ಕಪ್ಪು ಹಣದ ಲೆಕ್ಕ ಈವರೆಗೆ ಸಿಕ್ಕಿಲ್ಲ. ಜನರನ್ನು ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಸರಕಾರವು, ತನ್ನ ವೈಫಲ್ಯತೆ ಕುರಿತು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳ ರದ್ಧತಿ ಬಗ್ಗೆ ಪ್ರಚಾರ ಮಾಡಲು 25 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಜನರ ದುಡ್ಡನ್ನು ವ್ಯರ್ಥ ಮಾಡಲಾಗಿದೆ. ನೋಟುಗಳ ಅಮಾನ್ಯೀಕರಣದಿಂದ ಯಾವ ಸಮಸ್ಯೆಗಳು ಬಗೆಹರಿದಿಲ್ಲ ಎಂದು ವೇಣುಗೋಪಾಲ್ ವಾಗ್ದಾಳಿ ನಡೆಸಿದರು.
ಅಮಿತ್ ಶಾ ವಿರುದ್ಧ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಅತೀ ಭ್ರಷ್ಟ ಸರಕಾರ ಎಂದು ಕರೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಯಾವುದೇ ನೈತಿಕ ಹಕ್ಕಿಲ್ಲ. ಗುಜರಾತ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಏನೆಲ್ಲಾ ಘಟನೆಗಳು ಜರುಗಿದವು ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದು ಅವರು ವೇಣುಗೋಪಾಲ್ ತಿರುಗೇಟು ನೀಡಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದಿ ಭಾಷೆಯನ್ನು ಬಲವಂತವಾಗಿ ರಾಜ್ಯದ ಮೇಲೆ ಹೇರುವುದನ್ನು ನಾವು ವಿರೋಧಿಸುತ್ತೇವೆ. ಕೇಂದ್ರ ಸರಕಾರವು ರಾಜಕೀಯ ಕಾರಣಗಳಿಗಾಗಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ದಳದಂತಹ ಇನ್ನಿತರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರಕಾರವು ಈ ಎಲ್ಲ ಇಲಾಖೆಗಳನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಸದೆ ಬಡಿಯಲು ಬಳಸಿಕೊಳ್ಳುತ್ತಿದೆ. ನಾವು ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಿದ್ದೇವೆ ಎಂದ ಅವರು, ರಾಜ್ಯ ಸರಕಾರವು ಎಸಿಬಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಬಿಜೆಪಿ ಆರೋಪವು ಆಧಾರರಹಿತವಾದದ್ದು ಎಂದರು.
ರಾಜ್ಯದಲ್ಲಿ ನಮ್ಮ ಸರಕಾರ ಒಳ್ಳಯೆ ಕೆಲಸ ಮಾಡಿದೆ. ಶೇ.80ರಷ್ಟು ಚುನಾವಣಾ ಭರವಸೆಗಳನ್ನು ಈಡೇರಿಸಿದೆ. ಹೀಗಾಗಿ, ರಾಜ್ಯದ ಜನರು ನಮ್ಮನ್ನು ಮತ್ತೊಮ್ಮೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿ ನೀಡುವ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ಧ. ಆದರೆ, ನಮ್ಮ ಸವಾಲು ಸ್ವೀಕರಿಸಲು ಬಿಜೆಪಿ ಸಿದ್ಧವಿಲ್ಲ ಎಂದು ಅವರು ಹೇಳಿದರು.
ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ಮಾಡಿದ್ದೇವೆ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಬಿಜೆಪಿಯ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವ ಶಕ್ತಿ ನಮಗಿದೆ. ರಾಜ್ಯದಲ್ಲಿ ಶೇ.80ರಷ್ಟು ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಇನ್ನು ಒಂದು ವಾರದೊಳಗೆ ಶೇ.10ರಷ್ಟು ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.
ಕಳೆದ ಎರಡು ದಿನದಿಂದ ಪಕ್ಷ ಸಂಘಟನೆ ಹಾಗೂ ಸಚಿವರ ಕಾರ್ಯವೈಖರಿ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಎಲ್ಲ ಸಚಿವರು ಉತ್ತಮವಾಗಿ ತಮ್ಮ ಜವಾಬ್ದಾರಿ ಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ವೇಣುಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮವಿಲ್ಲ
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಯಾವುದೆ ಕ್ರಮ ಕೈಗೊಳ್ಳುವುದಿಲ್ಲ. ವಿವಾದಕ್ಕೆ ಕಾರಣವಾಗಿರುವ ಅವರ ಹೇಳಿಕೆಯು ವೈಯಕ್ತಿಕವಾದದ್ದು. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಅವರು ಮಾಡಿರುವ ಭಾಷಣದ ಕೆಲ ತುಣುಕನ್ನು ಮಾತ್ರ ತಿರುಚಿ ಪ್ರಕಟಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ, ಈಗಾಗಲೆ ಅವರು ಈ ಸಂಬಂಧ ಕ್ಷಮೆಯನ್ನು ಕೋರಿದ್ದಾರೆ. ಆದುದರಿಂದ, ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಉದ್ಭವ ಆಗುವುದಿಲ್ಲ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಚುನಾವಣೆಗೆ ನಾವು ಸಿದ್ಧ
ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ, ಕೇಂದ್ರ ಸರಕಾರದ ಸಾಧನೆಗಳ ಕುರಿತು ನಮ್ಮೆಂದಿಗೆ ಚರ್ಚಿಸಲು ಬಿಜೆಪಿ ಸಿದ್ಧವಿಲ್ಲ. ರಾಜ್ಯದಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದೆ. ಬೂತ್ ಹಾಗೂ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಸೂಚನೆ ನೀಡಿದ್ದೇವೆ. ಹೀಗಾಗಿ ಯಾವಾಗ ಚುನಾವಣೆ ನಡೆದರೂ ನಾವು ಧೈರ್ಯವಾಗಿ ಎದುರಿಸಲು ಸಿದ್ಧ.
-ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ







