ರೇಪ್ ಬಾಬಾನಿಗೆ ಪದ್ಮ ಪ್ರಶಸ್ತಿ ನೀಡುವಂತೆ 4,200 ಮಂದಿಯಿಂದ ಶಿಫಾರಸು!

ಹೊಸದಿಲ್ಲಿ, ಆ.31: ಈ ವರ್ಷದ ಪದ್ಮ ಪ್ರಶಸ್ತಿಗಾಗಿ ಅತ್ಯಾಚಾರಿ ಗುರ್ಮೀತ್ ಸಿಂಗ್ ನನ್ನು ಉಲ್ಲೇಖಿಸಿ ಕೇಂದ್ರ ಸರಕಾರಕ್ಕೆ 4,200 ಶಿಫಾರಸುಗಳು ಬಂದಿವೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಐದು ಬಾರಿ ಸ್ವತಃ ಗುರ್ಮೀತ್ ತನ್ನನ್ನು ತಾನೇ ಶಿಫಾರಸು ಮಾಡಿದ್ದ ಎನ್ನಲಾಗಿದೆ.
ಸ್ವತಃ ನಿರ್ಮಾಣದ ಚಿತ್ರಗಳಲ್ಲಿ ತಾನೇ ನಾಯಕನಾಗಿ ನಟಿಸಿದ್ದ ಈ 50 ವರ್ಷದ ಸ್ವಯಂಘೋಷಿತ ದೇವಮಾನವನ ಹೆಸರನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸುಗಳು ಹರಿದುಬಂದಿತ್ತು. ಇಬ್ಬರು ಸಾಧ್ವಿಗಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಗುರ್ಮೀತ್ ಗೆ ನ್ಯಾಯಾಲಯವು 20 ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದ ಒಂದು ವಾರಗಳ ಮುಂಚೆಯೇ ಇಂತಹ ಶಿಫಾರಸುಗಳು ಬಂದಿತ್ತು.
2015 ಅಥವಾ 2016 ಈತನಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಯಾವುದೇ ಶಿಫಾರಸುಗಳು ಬಂದಿಲ್ಲ. ಆದರೆ 2017ರಲ್ಲಿ 4200 ಶಿಫಾರಸುಗಳು ಬಂದಿವೆ.
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ ಹಾಗೂ ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪದ್ಮ ಪುರಸ್ಕಾರಗಳಿಗೆ ಯಾರ ಹೆಸರನ್ನು ಬೇಕಾದರೂ ಯಾರೂ ಕೂಡ ಆನ್ ಲೈನ್ ನಲ್ಲಿ ಶಿಫಾರಸು ಮಾಡಬಹುದು ಎಂದು ಕೇಂದ್ರ ಸರಕಾರ ಹೇಳಿತ್ತು.
ಅಭಾ, ಆದಿತ್ಯ, ಅಕ್ಬರ್, ಅಲ್ಫೆಝ್, ಬಲ್ಜಿಂದರ್, ಮಿಲ್ಕಿ, ಕೋಮಲ್ ಮೊದಲಾದ ಹೆಸರುಗಳು ಗುರ್ಮೀತ್ ನನ್ನು ಶಿಫಾರಸು ಮಾಡಿವೆ. ಸಿರ್ಸಾ ಎಂಬಲ್ಲಿನ ಅಮಿತ್ ಎಂಬ ಹೆಸರಿನ ವ್ಯಕ್ತಿ ಗುರ್ಮೀತ್ ನ ಹೆಸರನ್ನು 31 ಬಾರಿ, ಸುನೀಲ್ ಎಂಬಾತ 27 ಬಾರಿ ಶಿಫಾರಸು ಮಾಡಿದ್ದಾನೆ.







