ದೋಣಿ ಮುಳುಗಿ 16 ರೊಹಿಂಗ್ಯರ ಸಾವು
ಮ್ಯಾನ್ಮಾರ್‌ನಿಂದ ಬಾಂಗ್ಲಾಕ್ಕೆ ಪಲಾಯನಗೈಯುತ್ತಿದ್ದ ವೇಳೆ ದುರಂತ

ಕಾಕ್ಸ್‌ಬಝಾರ್ (ಬಾಂಗ್ಲಾದೇಶ), ಆ. 31: ಮ್ಯಾನ್ಮಾರ್‌ನಲ್ಲಿ ಸೇನೆಯ ಹಿಂಸೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈಯುತ್ತಿದ್ದ ರೊಹಿಂಗ್ಯ ಮುಸ್ಲಿಮರ ದೋಣಿ ಮುಳುಗಿ 16 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಕ್ಕಳು.
ಬಾಂಗ್ಲಾದೇಶದ ತಟರಕ್ಷಣಾ ಪಡೆ ಸಿಬ್ಬಂದಿ ಗುರುವಾರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ.
ರೊಹಿಂಗ್ಯ ಬಂಡುಕೋರರು ಪೊಲೀಸ್ ಠಾಣೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದಾರೆನ್ನಲಾಗಿದ್ದು, ಅದಕ್ಕೆ ಪ್ರತಿಯಾಗಿ ಸೇನೆಯು ರೊಹಿಂಗ್ಯ ಮುಸ್ಲಿಮರು ವಾಸಿಸುತ್ತಿರುವ ಗ್ರಾಮಗಳಲ್ಲಿ ದಮನ ಕಾರ್ಯಾಚರಣೆ ನಡೆಸುತ್ತಿದೆ.
ಸೇನೆಯ ಹಿಂಸೆಗೆ ಬೆದರಿ ಒಂದು ವಾರದ ಅವಧಿಯಲ್ಲಿ ಕನಿಷ್ಠ 18,500 ರೊಹಿಂಗ್ಯರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ನಾಫ್ ನದಿಯು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳನ್ನು ಪ್ರತ್ಯೇಕಿಸುತ್ತದೆ. ರೊಹಿಂಗ್ಯರು ಭಾರೀ ಸಂಖ್ಯೆಯಲ್ಲಿ ಸಣ್ಣ ದೋಣಿಗಳ ಮೂಲಕ ನದಿ ದಾಟಲು ಪ್ರಯತ್ನಿಸುತ್ತಾರೆ. ಆದರೆ, ನದಿಯ ಪ್ರಬಲ ಹರಿವನ್ನು ತಾಳಿಕೊಳ್ಳಲು ಈ ಸಣ್ಣ ದೋಣಿಗಳು ವಿಫಲವಾಗುತ್ತವೆ. ಹಾಗಾಗಿ, ಹತಾಶೆಯಿಂದ ನದಿ ದಾಟಲು ಬರುವ ರೊಹಿಂಗ್ಯರು ಮುಳುಗುತ್ತಾರೆ.
ಬುಧವಾರ ಸಣ್ಣ ದೋಣಿಯೊಂದು ನದಿಯಲ್ಲಿ ಮುಳುಗಿದ್ದು, ಇಬ್ಬರು ರೊಹಿಂಗ್ಯ ಮಹಿಳೆಯರು ಮತ್ತು ಇಬ್ಬರು ಮಕ್ಕಳ ಮೃತದೇಹಗಳು ಬಾಂಗ್ಲಾದೇಶದ ತೀರದಲ್ಲಿ ಪತ್ತೆಯಾಗಿದ್ದವು.
ಗುರುವಾರ ಇನ್ನೊಂದು ದೋಣಿ ಮುಳುಗಿ 16 ರೊಹಿಂಗ್ಯರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿ ನೂರುಲ್ ಅಮಿನ್ ರೊಹಿಂಗ್ಯ ತಿಳಿಸಿದರು.







