ಗಾಂಜಾ ಸಾಗಾಟ ಪ್ರಕರಣ: ಅಪರಾಧಿಗಳಿಗೆ ಶಿಕ್ಷೆ
ಮಂಗಳೂರು, ಆ. 31: ದ್ವಿಚಕ್ರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರಿಗೆ ಮಂಗಳೂರಿನ ವಿಶೇಷ ನ್ಯಾಯಾಲಯವು 1 ವರ್ಷ 6 ತಿಂಗಳು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನರಿಂಗಾನ ತೌಡುಗೋಳಿ ನಿವಾಸಿ ಹಫೀಝ್ ಅಲಿಯಾಸ್ ಅಬಿ (32), ಮಂಜೇಶ್ವರ ಉಪ್ಪಳ ನಿವಾಸಿ ಮುಹಮ್ಮದ್ ಸಿರಾಜ್ (22), ಬೆಳ್ಮ ರೆಂಜಾಡಿ ನಿವಾಸಿ ಮುಹಮ್ಮದ್ ಇಮ್ತಿಯಾಝ್ (28) ಶಿಕ್ಷೆಗೊಳಗಾದ ಅಪರಾಧಿಗಳು.
2016ರ ಮೇ 10ರಂದು ಕುರ್ನಾಡು ಹೂವಿನ ಕೊಪ್ಪಲದಿಂದ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಣಾಜೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಹಫೀಝ್, ಸಿರಾಜ್, ಇಮ್ತಿಯಾಝ್‌ನನ್ನು ವಶಕ್ಕೆ ಪಡೆದು ಒಟ್ಟು 1ಕೆಜಿ 100 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಂದರ್ಭ ಅವರ ಬಳಿ 1 ತಲವಾರು ಕೂಡಾ ಪತ್ತೆಯಾಗಿತ್ತು.
ಈ ಬಗ್ಗೆ ಕೋಣಾಜೆ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್ ಅವರ ವಿರುದ್ಧ ಮಾದಕ ದ್ರವ್ಯ ಕಾಯ್ದೆ ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬಿಳಗಿ ಸಾಕ್ಷಿ ವಿಚಾರಣೆ ನಡೆಸಿ ಇತ್ತಂಡಗಳ ವಾದ ಆಲಿಸಿ ಶಿಕ್ಷೆ ವಿಧಿಸ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 30ದಿನಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.







