ಐಫೆಲ್ ಗೋಪುರದ ಪ್ರತಿಕೃತಿ, ರೊಬೋಟ್ ಪ್ರಾಣಿಗಳ ಪ್ರದರ್ಶನ
ಮಂಗಳೂರು, ಆ. 31: ರಾಷ್ಟ್ರೀಯ ಗ್ರಾಹಕರ ಮೇಳ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಸೆ.1ರಂದು ಸಂಜೆ 6 ಗಂಟೆಗೆ ಶುಭಾರಂಭಗೊಳ್ಳಲಿದೆ.
ಐಫೆಲ್ ಗೋಪುರದೆದುರು ಮತ್ತು ರೊಬೋಟ್ ಪ್ರಾಣಿಗಳ ಜೊತೆ ಸೆಲ್ಫಿ ತೆಗೆಯುವ ಕನಸು ಇದೀಗ ನನಸು! ರಾಷ್ಟ್ರೀಯ ಗ್ರಾಹಕರ ಮೇಳವು ದಕ್ಷಿಣ ಭಾರತಾದ್ಯಂತ ಕಳೆದ ಮೂರು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ಎನ್‌ಸಿಎಫ್‌ನಿಂದ ಸಂಘಟಿಸಲ್ಪಡುತ್ತಿದೆ.
ಮಂಗಳೂರಿಗೆ ಸ್ನೋವಲ್ಡ್, ಅಕ್ವಾ ಶೋ, ಬರ್ಡ್‌ಶೋ, ತಾಜ್‌ಮಹಲ್‌ನಂತಹ ನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಸ ಶೋಗಳನ್ನು ನೀಡುತ್ತಿದೆ. ಯಶಸ್ವಿ ಹತ್ತನೇ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್ ಮತ್ತು ಮನರಂಜನಾ ಮೇಳವಾಗಿರುತ್ತದೆ.
ಈ ಬಾರಿ ಅತಿ ದೊಡ್ಡ ಐಫೆಲ್ ಗೋಪುರದ ಪ್ರತಿಕೃತಿ ಮತ್ತು ರೊಬೋಟ್ ಪ್ರಾಣಿಗಳ ಪ್ರದರ್ಶನವನ್ನು ಮಂಗಳೂರಿನ ಜನತೆಗೆ ಪ್ರಸ್ತುತಪಡಿಸಲಿದೆ. 90 ಅಡಿ ಎತ್ತರದ ಉಕ್ಕಿನ ಐಫೆಲ್ ಗೋಪುರದ ಪ್ರತಿಕೃತಿ ನಿರ್ಮಾಣ. 20 ಟನ್ ಉಕ್ಕಿನಿಂದ ನಿರ್ಮಾಣಗೊಂಡ ಈ ಪ್ರತಿಕೃತಿ ಕರಾವಳಿ ವಸ್ತು ಪ್ರದರ್ಶನ ಮೈದಾನವಾದ ಮಂಗಳಾ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ಪ್ರತಿಕೃತಿ ವೀಕ್ಷಣೆಗೆ ಲಭ್ಯವಾಗಲಿದೆ.
10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೊತ್ತಮೊದಲ ಬಾರಿಗೆ ಮಂಗಳೂರಿನಲ್ಲಿ ನೈಜಗಾತ್ರದ ರೊಬೋಟ್ ಪ್ರದರ್ಶನಗೊಳ್ಳಲಿದೆ. ಪ್ರಾಣಿಗಳ ಪ್ರದರ್ಶನ ವಿವಿಧ ಖಂಡದ ವನ್ಯಮೃಗಗಳನ್ನು ಒಂದೇ ಮೃಗಾಲಯದಲ್ಲಿ ವೀಕ್ಷಿಸಬಹುದು. ಸಹಜ ಎನಿಸುವ ಪ್ರಾಣಿಗಳ ಚಲನೆ ಹಾಗೂ ಶಬ್ದ ನೈಜತೆಯ ಅನುಭವ ನೀಡುತ್ತದೆ. ಜನರಲ್ಲಿ ನಿಸರ್ಗ ಮತ್ತು ಪ್ರಾಣಿ ಸಂರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶ ಇದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿವೆ ಎಂದು ಪ್ರಕಟನೆ ತಿಳಿಸಿದೆ.







