ಯಮನ್: ಸಂಘರ್ಷದ ಬರ್ಬರತೆಯನ್ನು ಜಗತ್ತಿನ ಮುಂದಿಟ್ಟ ಬುತೈನಾ
ಕುಟುಂಬದ ಎಲ್ಲಾ ಸದಸ್ಯರು ಮೃತಪಟ್ಟು ಅನಾಥವಾದ 4 ವರ್ಷದ ಮಗು

ಸನಾ (ಯಮನ್), ಆ. 31: ಒಂದು ವರ್ಷದ ಹಿಂದೆ, ಅಲೆಪ್ಪೊದಲ್ಲಿ ವಾಯು ದಾಳಿಯೊಂದು ನಡೆದ ಬಳಿಕ ಗಾಯಗೊಂಡು ಆಘಾತದಿಂದ ಆ್ಯಂಬುಲೆನ್ಸ್‌ನಲ್ಲಿ ಕುಳಿತಿದ್ದ 4 ವರ್ಷದ ಉಮ್ರಾನ್, ಸಿರಿಯದ ಆರು ವರ್ಷಗಳ ಆಂತರಿಕ ಯುದ್ಧದ ಬರ್ಬರತೆಯನ್ನು ಜಗತ್ತಿನ ಮುಂದಿಟ್ಟಿದ್ದ.
ಕಳೆದ ವಾರ, ಯಮನ್‌ನ ಹೆಣ್ಣು ಮಗುವೊಂದು ಆ ದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಅಮಾನವೀಯತೆಯನ್ನು ಪ್ರಪಂಚದ ಮುಂದೆ ತೆರೆದಿಟ್ಟಿದೆ.
ಯಮನ್ ರಾಜಧಾನಿ ಸನಾದ ಅಪಾರ್ಟ್‌ಮೆಂಟೊಂದರ ಮೇಲೆ ನಡೆದ ವಾಯುದಾಳಿಯಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟರು. ಬುತೈನಾ ಮುಹಮ್ಮದ್ ಮನ್ಸೂರ್ ಎಂಬ ಸಣ್ಣ ಮಗು ಮಾತ್ರ ಈ ದಾಳಿಯಲ್ಲಿ ಬದುಕುಳಿದಿದೆ.
ನಾಲ್ಕು ಅಥವಾ ಐದು ವರ್ಷದ ಬುತೈನಾಳನ್ನು ರಕ್ಷಣಾ ಕಾರ್ಯಕರ್ತರು ಅವಶೇಷಗಳ ಅಡಿಯಿಂದ ಮೇಲೆತ್ತುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಬುತೈನಾ ತಲೆಬುರುಡೆ ಮುರಿತಕ್ಕೆ ಒಳಗಾಗಿದ್ದಾಳಾದರೂ, ಬದುಕುತ್ತಾಳೆ ಎಂದು ವೈದ್ಯರು ಹೇಳುತ್ತಾರೆ.
ತನ್ನ ಇಡೀ ಕುಟುಂಬ ಸತ್ತಿದೆ ಎನ್ನುವುದು ಮಗುವಿಗೆ ಗೊತ್ತಿಲ್ಲ. ಗೊಡವೆ ಇಲ್ಲದಂತಿರುವ ಮಗು ಆಸ್ಪತ್ರೆಯಲ್ಲಿ ಶನಿವಾರ ತನ್ನ ಮಾವ ಮುನೀರ್‌ನನ್ನು ಕರೆಯುತ್ತಿತ್ತು. ಮುನೀರ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.







