ಅರ್ಜುನ ಪ್ರಶಸ್ತಿ ವಿಜೇತೆ ಜ್ಯೋತಿ ಸುರೇಖಾಗೆ 1 ಕೋ.ರೂ. ಬಹುಮಾನ

ಅಮರಾವತಿ, ಆ.31: ಎರಡು ದಿನಗಳ ಹಿಂದೆ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಬಿಲ್ಲುಗಾರ್ತಿ ವೆನ್ನಂ ಜ್ಯೋತಿ ಸುರೇಖಾಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ 1 ಕೋ.ರೂ. ಬಹುಮಾನ ಘೋಷಿಸಿದ್ದಾರೆ.
ಗುರುವಾರ ಮಧ್ಯಾಹ್ನ ಸಿಎಂ ನಾಯ್ಡುರನ್ನು ಭೇಟಿಯಾದ ಸುರೇಖಾಗೆ ವಿಜಯವಾಡದಲ್ಲಿ ನಿವೇಶನ ಹಾಗೂ ಸರಕಾರಿ ಉದ್ಯೋಗವನ್ನು ನೀಡುವ ಭರವಸೆ ನೀಡಲಾಗಿದೆ.
‘‘ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಆರ್ಚರಿ ಸ್ಪರ್ಧೆಗಳಲ್ಲಿ 70 ಪದಕಗಳನ್ನು ಜಯಿಸಿದ್ದ ಸುರೇಖಾ ಆಂಧ್ರಕ್ಕೆ ಹೆಮ್ಮೆ ತಂದಿದ್ದಾರೆ. ಅರ್ಜುನ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಕಿರಿಯ ಅಥ್ಲೀಟ್ ಆಗಿದ್ದಾರೆ’’ ಎಂದು ಮುಖ್ಯಮಂತ್ರಿ ನಾಯ್ಡು ಹೇಳಿದ್ದಾರೆ. ಪ್ರಸ್ತುತ ಎಂಬಿಎ ಓದುತ್ತಿರುವ ಸುರೇಖಾ ಒಲಿಂಪಿಕ್ಸ್ ಪದಕ ಜಯಿಸುವುದು ತನ್ನ ಗುರಿ ಎಂದು ಹೇಳಿದ್ದಾರೆ.
ರಾಜ್ಯದ 10 ಪ್ರಮುಖ ಕ್ರೀಡಾಪಟುಗಳನ್ನು ಗುರುತಿಸಿ ಎಲ್ಲ ಅಗತ್ಯದ ನೆರವು ನೀಡಬೇಕೆಂದು ನಾಯ್ಡು ವಿಶೇಷ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದರು.
ಸ್ಕೇಟಿಂಗ್‌ನಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿರುವ ತಿರುಪತಿಯ ದೇವಿಶ್ರೀ ಪ್ರಸಾದ್‌ಗೆ 10 ಲಕ್ಷ ರೂ.ಬಹುಮಾನ ನೀಡಿದ್ದಾರೆ.





