ಉಣ್ಣುವ ಅನ್ನಕ್ಕೆ ಕಲ್ಲು ಹಾಕಬೇಡಿ
ಮಾನ್ಯರೆ,
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಇಂದಿರಾ ಕ್ಯಾಂಟೀನ್’ ಮೂಲಕ ಅತೀಕಡಿಮೆ ದರದಲ್ಲಿ ತಿಂಡಿ, ಊಟ ನೀಡುವ ಯೋಜನೆಗೆ ಚಾಲನೆ ನೀಡಿರುವ ಬೆನ್ನಲ್ಲೇ ರಾಜಕೀಯದಾಟ ಶುರುವಾಗಿದೆ. ಈಗ ಪ್ರತಿಯೊಂದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಬೆಂಗಳೂರಲ್ಲಿದೆ. ಅಂಥದರಲ್ಲಿ ತಿಂಡಿ, ಊಟ ಪೂರೈಸ ಬೇಕೆಂದರೆ ದಿನಕ್ಕೆ ಕಡಿಮೆಯೆಂದರೂ 150 ರೂಪಾಯಿ ಬೇಕೇ ಬೇಕು. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಲ್ಲಿ ಕೇವಲ ಐದು ರೂಪಾಯಿಗೆ ತಿಂಡಿ, ಊಟ ಕೊಡುವಾಗ ಅದಕ್ಕೂ ‘ಚುನಾವಣಾ ರಾಜಕೀಯ’ದ ಲೇಪ ಹಚ್ಚುವುದು ತರವಲ್ಲ. ಬೆಂಗಳೂರಿನಲ್ಲಿ ಅದೆಷ್ಟೋ ಮಂದಿ ಇವತ್ತಿಗೂ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದೀಗ ಇಂದಿರಾ ಕ್ಯಾಂಟೀನ್, ಆಹಾರ ಇಲ್ಲದವರಿಗೆ ಕೈ ತುತ್ತು ಉಣಿಸುತ್ತಿದೆ. 50 ರೂಪಾಯಿ ಕೊಟ್ಟರೂ ಬೆಂಗಳೂರಲ್ಲಿ ಇಂದು ತೃಪ್ತಿಯಾಗಿ ಬೆಳಗ್ಗಿನ ತಿಂಡಿ ತಿನ್ನಲು ಸಾಧ್ಯವಾಗಲಾರದು. ಊಟಕ್ಕೆ 60ರಿಂದ ದರ ಶುರುವಾಗುತ್ತದೆ. ಇದೀಗ ‘ಇಂದಿರಾ ಕ್ಯಾಂಟೀನ್’ ಮೂಲಕ ಭಿಕ್ಷುಕರು, ಆಟೊ ಚಾಲಕರು, ಗಾರ್ಮೆಂಟ್ಸ್ ಉದ್ಯೋಗಿಗಳು, ಮಧ್ಯಮ ವರ್ಗದವರು ನೆಮ್ಮದಿಯಾಗಿ ಊಟ, ತಿಂಡಿ ಪೂರೈಸುತ್ತಿದ್ದಾರೆ. ಉಳ್ಳವರ ಮಧ್ಯೆ ಇಲ್ಲದವರು ನೆಮ್ಮದಿಯಾಗಿ ಊಟ, ತಿಂಡಿ ತಿನ್ನಲಿ. ಇದಕ್ಕೂ ಕಲ್ಲು ಹಾಕುವ ಪ್ರಯತ್ನ ಸರಿಯೇ? -ಶಂಶೀರ್ ಬುಡೋಳಿ,
ಬೆಂಗಳೂರು





