ಚುನಾವಣಾ ಆಯಕ್ತರಾಗಿ ಅರೋರಾ, ಮೆಹ್ರಿಶಿಗೆ ಸಿಎಜಿ ಪಟ್ಟ

ಹೊಸದಿಲ್ಲಿ: ಗೃಹಕಾರ್ಯದರ್ಶಿಯಾಗಿ ನಿವೃತ್ತರಾಗುತ್ತಿರುವ ರಾಜೀವ್ ಮೆಹ್ರಿಶಿ ಅವರನ್ನು ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಜತೆಗೆ 17 ಮಂದಿ ಉನ್ನತ ಅಧಿಕಾರಿಗಳ ಹೊಣೆಗಾರಿಕೆಯನ್ನು ಪುನರ್ರಚಿಸಲಾಗಿದೆ.
ಚುನಾವಣಾ ಆಯೋಗದ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಿರುವ ಕೇಂದ್ರ ಸರಕಾರ, ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಕಾರ್ಯದರ್ಶಿ ಸುನೀಲ್ ಅರೋರಾ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಿದೆ. ರಾಜೀವ್ ಕುಮಾರ್, ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ನಿಯುಕ್ತರಾಗಿದ್ದರೆ, ಸಿಬಿಎಸ್‌ಇ ಅಧ್ಯಕ್ಷರಾಗಿ ಅನಿತಾ ಕರ್ವಾಲ್ ನೇಮಕಗೊಂಡಿದ್ದಾರೆ.
ಗುರುವಾರ ಸೇವೆಯಿಂದ ನಿವೃತ್ತರಾದ ಮೆಹ್ರಿಶಿ ಜತೆಗೆ ಉಪ ಸಿಎಜಿಯಾಗಿ ಐಎ & ಎಸ್ ಅಧಿಕಾರಿ ರಂಜನ್ ಕುಮಾರ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಸಿಎಜಿ ಹುದ್ದೆಯೊಂದಿಗೆ ಮಹರ್ಷಿ ಭಾರತೀಯ ಆಡಳಿತ ವ್ಯವಸ್ಥೆಯ ಮೂರು ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದಂತಾಗಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಇವರು ಇದೀಗ ಆಡಿಟರ್ ಜನರಲ್ ಆಗಿಯೂ ನಿಯುಕ್ತರಾಗಿದ್ದಾರೆ. ಎನ್.ಎನ್.ವೋರಾ ಅವರ ರಾಜ್ಯಪಾಲ ಹುದ್ದೆಯನ್ನು ಇವರಿಗೆ ನೀಡಲಾಗುತ್ತದೆ ಎಂಬ ವದಂತಿಗಳಿಗೆ ಇದರಿಂದ ತೆರೆ ಬಿದ್ದಂತಾಗಿದೆ.
ಮೆಹ್ರಿಶಿಯವರು ಸೆಪ್ಟಂಬರ್ 24ರಂದು ಅಧಿಕಾರ ವಹಿಸಿಕೊಳ್ಳುವರು. ಟಿ.ಎನ್.ಚತುರ್ವೇದಿ ಬಳಿಕ ಈ ಸಂವಿಧಾನಾತ್ಮಕ ಹುದ್ದೆಗೆ ನಿಯುಕ್ತರಾದ ಎರಡನೆ ಗೃಹ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಮೆಹ್ರಿಶಿ ಪಾತ್ರರಾಗಿದ್ದಾರೆ. 62 ವರ್ಷದ ಮೆಹ್ರಿಶಿ ಇದೀಗ 65ನೆ ವರ್ಷದವರೆಗೆ ಸಿಎಜಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ನಸೀಂ ಝಿಯಾದಿಯವರು ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಲ್ಲಿ ಜುಲೈನಲ್ಲಿ ನಿವೃತ್ತರಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಹುದ್ದೆ ಖಾಲಿ ಇತ್ತು. ಅಚಲ್ ಕುಮಾರ್ ಜೋತಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದು, ಓ.ಪಿ.ರಾವತ್ ಮತ್ತೊಬ್ಬ ಆಯುಕ್ತರು.







