'ನಾನು ಬದುಕಿದ್ದೇನೆ...ಬನ್ನಿ ನನ್ನ ಜೀವವನ್ನು ಉಳಿಸಿ'
ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯ ವಾಟ್ಸ್‌ಆ್ಯಪ್ ಸಂದೇಶ

ಮುಂಬೈ, ಸೆ.1: ಮುಂಬೈನಲ್ಲಿ ಗುರುವಾರ ಬೆಳಗ್ಗೆ 117 ವರ್ಷ ಹಳೆಯ ಐದಂಸ್ತಿನ ಕಟ್ಟಡ ಕುಸಿದುಬಿದ್ದಿದ್ದು ಈ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಜಾಫರ್ ರಿಝ್ವಿ ಎಂಬುವವರು ತನ್ನ ಸಂಬಂಧಿಕರಿಗೆ "ನಾನು ಬದುಕಿದ್ದೇನೆ...ಬನ್ನಿ ನನ್ನ ಜೀವವನ್ನು ಉಳಿಸಿ" ಎಂಬ ವಾಟ್ಸ್‌ಆ್ಯಪ್ ಸಂದೇಶವೊಂದು ಕಳುಹಿಸಿದ ಘಟನೆ ಬೆಳಕಿಗೆ ಬಂದಿದೆ.
ರಿಝ್ವಿ ಸಂಬಂಧಿಕರು ವಾಟ್ಸ್‌ಆ್ಯಪ್ ಮೆಸೇಜ್‌ನ್ನು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ರಿಝ್ವಿ ಹಾಗೂ ಅವರ ಪತ್ನಿ ರೇಶ್ಮಾರ ಜೀವ ಉಳಿಸಲು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಜಾಫರ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಡಿ ಬಜಾರ್‌ನ ಕಟ್ಟಡದಲ್ಲಿ ವಾಸವಾಗಿದ್ದಾರೆ. ರಿಝ್ವಿಯ 13 ಹಾಗೂ 14 ವರ್ಷದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
"'ಬೆಳಗ್ಗೆ 8 ಗಂಟೆಗೆ ನನ್ನ ಸಹೋದರನೊಂದಿಗೆ ನಾನು ಮಾತನಾಡಿದ್ದೆ. ಆನಂತರ ಕಟ್ಟಡ ಕುಸಿದುಬಿದ್ದ ಸುದ್ದಿ ಬಂತು. ಜಾಫರ್ ನನ್ನ ಸಂಬಂಧಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದ. ಅದನ್ನು ನಾನು ಪೊಲೀಸರಿಗೆ ತೋರಿಸಿದ್ದೇನೆ'' ಎಂದು ಜಾಫರ್ ರಿಝ್ವಿ ಸಹೋದರ ಸೈಯದ್ ರಿಝ್ವಿ ಹೇಳಿದ್ದಾರೆ.
ಗುರುವಾರ ಮುಂಬೈನ ಬೆಂಡಿಬಜಾರ್‌ನಲ್ಲಿ ಬಹು ಮಹಡಿ ಕಟ್ಟಡ ಕುಸಿದುಬಿದ್ದಿದ್ದು, ಈ ಘಟನೆಯಲ್ಲಿ 34 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಜನರಿಗೆ ಗಾಯವಾಗಿದೆ.







