ದುಷ್ಕರ್ಮಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ರೈಲುನಿಂದ ಜಿಗಿದ ಯುವತಿ

ವಿಜಯವಾಡ, ಸೆ.1: ವಿಜಯವಾಡದ ಇಂಜಿನಿಯರಿಂಗ್ ಯುವತಿಯೊಬ್ಬರು ಮೂವರು ದುಷ್ಕರ್ಮಿಗಳ ಕಿರುಕುಳದಿಂದ ಪಾರಾಗಲು ಚಲಿಸುತ್ತಿದ್ದ ರೈಲಿನಿಂದ ಜಿಗಿದ ಘಟನೆ ವರದಿಯಾಗಿದೆ.
ಚೆನ್ನೈನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ 25ರಹರೆಯದ ಯುವತಿ ಹಝ್ರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್‌ನಲ್ಲಿ ಎಸ್-1 ಬೋಗಿಯಲ್ಲಿ ವಿಜಯವಾಡಕ್ಕೆ ತೆರಳುತಿದ್ದರು. ಈ ವೇಳೆ ಅವರಿದ್ದ ಕಂಪಾರ್ಟ್‌ಮೆಂಟ್‌ಗೆ ನುಸುಳಿದ ಮೂವರು ದುಷ್ಕರ್ಮಿಗಳು ಯುವತಿಗೆ ಕಿರುಕುಳ ನೀಡಲಾರಂಭಿಸಿದರು.
ಈ ವೇಳೆ ರೈಲಿನಲ್ಲಿದ್ದ ಸಹ ಪ್ರಯಾಣಿಕರು ಯುವತಿಯ ರಕ್ಷಣೆಗೆ ಮುಂದಾಗಿಲ್ಲ. ಇದರಿಂದ ಭಯಭೀತಳಾದ ಯುವತಿ ರೈಲು ಸಿಂಗರಕೊಂಡ ರೈಲ್ವೆ ಸ್ಟೇಶನ್‌ನಿಂದ ನಿರ್ಗಮಿಸಿದ ತಕ್ಷಣ ರೈಲಿನಿಂದ ಜಿಗಿದಿದ್ದಾರೆ.
ಯುವತಿಗೆ ಗಂಭೀರ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ಆರ್‌ಪಿಎಫ್ ಪೊಲೀಸರು ವಿಜಯವಾಡ ಆರ್‌ಪಿಎಫ್ ಪೊಲೀಸರಿಗೆ ಸೂಚನೆ ನೀಡಿದ್ದು ಆರೋಪಿಗಳನ್ನು ರೈಲ್ವೆ ಸ್ಟೇಶನ್‌ನಲ್ಲಿ ಬಂಧಿಸಿ ಕೇಸ್ ದಾಖಲಿಸಲಾಗಿದೆ.
Next Story





