ಸಬ್ಸಿಡಿ ಸಹಿತ ಅಡುಗೆ ಅನಿಲ ಬೆಲೆ 7 ರೂ.ಏರಿಕೆ
ಪ್ರತಿ ತಿಂಗಳು ಬೆಲೆ ಏರಿಕೆಗೆ ಕೇಂದ್ರ ನಿರ್ಧಾರ

ಹೊಸದಿಲ್ಲಿ, ಸೆ.1: ಸಬ್ಸಿಡಿ ಸಹಿತ ಅಡುಗೆ ಅನಿಲ(ಎಲ್‌ಪಿಜಿ) ಪ್ರತಿ ಸಿಲಿಂಡರ್ ಬೆಲೆ 7 ರೂ. ಏರಿಕೆ ಮಾಡಲಾಗಿದ್ದು, ಪ್ರತಿ ತಿಂಗಳು ಬೆಲೆ ಏರಿಕೆಯ ಮೂಲಕ ಹಣಕಾಸು ವರ್ಷದ ಅಂತ್ಯಕ್ಕೆ ಸಬ್ಸಿಡಿಯನ್ನು ಸಂಪೂರ್ಣ ಕೈಬಿಡುವ ಸರಕಾರದ ನಿರ್ಧಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.
14.2 ಕೆಜಿ ತೂಕದ ಎಲ್‌ಪಿಪಿ ಸಿಲಿಂಡರ್ ಬೆಲೆ ದಿಲ್ಲಿಯಲ್ಲಿ 487.18 ರೂ. ಏರಿಕೆಯಾಗಿದೆ. ಮೊದಲು 479.77 ರೂ. ಇತ್ತು ಎಂದು ಭಾರತೀಯ ತೈಲ ನಿಗಮ ಹೇಳಿದೆ.
ಈ ವರ್ಷ ಮಾರ್ಚ್ ಅಂತ್ಯಕ್ಕೆ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಉದ್ದೇಶದಿಂದ ಎಲ್ಲ ರಾಜ್ಯ ಸ್ವಾಮ್ಯದ ತೈಲ ಕಂಪೆನಿಗಳಿಗೆ ಸಬ್ಸಿಡಿಯುಕ್ತ ಅಡುಗೆ ಅನಿಲದ ಬೆಲೆಯನ್ನು ಪ್ರತಿ ತಿಂಗಳು 4 ರೂ. ಏರಿಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಜುಲೈ 31 ರಂದು ಲೋಕಸಭೆಯಲ್ಲಿ ಕೇಂದ್ರ ತೈಲ ಸಚಿವ ಧಮೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಪ್ರತಿ ತಿಂಗಳು ಪ್ರತಿ ಸಿಲಿಂಡರ್‌ಗೆ 4 ರೂ. ಏರಿಕೆ ಮಾಡುವಂತೆ ಮೇ 30ರಂದು ತೈಲ ಸಚಿವಾಲಯ ಆದೇಶ ನೀಡಿದ ನಂತರ ನಾಲ್ಕನೆ ಬಾರಿ ಎಲ್‌ಪಿಜಿ ದರ ಏರಿಕೆಯಾಗಿದೆ.
ದೇಶದಲ್ಲಿ ಸುಮಾರು 18.11 ಕೋಟಿ ಜನರು ಸಬ್ಸಿಡಿಯುಕ್ತ ಎಲ್‌ಪಿಜಿಯನ್ನು ಬಳಸುತ್ತಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ 2.6 ಕೋಟಿ ಬಡ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ.





