‘ಬಕ್ರೀದ್’ ಹಬ್ಬವೂ ಕೋಮು-ಸೌಹಾರ್ದತೆ ಮೂಡಿಸಲು ಪ್ರೇರಣೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಸ್ಲಿಂ ಬಾಂಧವರಿಗೆ ಸಿಎಂ ಶುಭ ಹಾರೈಕೆ

ಬೆಂಗಳೂರು, ಸೆ.1: ತ್ಯಾಗದ ಹಬ್ಬ ಎಂದೇ ಎಲ್ಲೆಡೆ ಜನಪ್ರಿಯವಾಗಿರುವ ಬಕ್ರೀದ್ ಅಥವಾ ಈದ್-ಅಲ್-ಆಝಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ, ವಿಶೇಷವಾಗಿ ಎಲ್ಲ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದ್ದಾರೆ.
ನಿಷ್ಮಲ್ಮಶ ಭಕ್ತಿಗೆ ಅಲ್ಲಾಹ್‌ನ ಅನುಗ್ರಹ ಇದ್ದೇ ಇರುತ್ತದೆ ಎಂಬುದನ್ನು ಬಲವಾಗಿ ಪ್ರತಿಪಾದಿಸುವುದರ ಸಂಕೇತವಾಗಿರುವ ಬಕ್ರೀದ್ ಹಬ್ಬವು, ತ್ಯಾಗದ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತದೆ. ಬಹುಶಃ ಈ ಹಿನ್ನೆಲೆಯಲ್ಲಿಯೇ, ಬಕ್ರೀದ್ ಸಂದರ್ಭವನ್ನು ಪವಿತ್ರ ಹಜ್ ಯಾತ್ರೆಗೆ ಅತ್ಯುತ್ತಮ ಕಾಲ ಎಂದು ಬಣ್ಣಿಸುತ್ತಾರೆ.
‘ಮುಸ್ಲಿಮರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಾಳೆ(ಸೆ.2) ಬೆಳಗ್ಗೆ 9:50ರ ಸುಮಾರಿಗೆ ಇಲ್ಲಿನ ಚಾಮರಾಜಪೇಟೆ ಈದ್ಗಾ ವೆೆುದಾನದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದು, ಮುಸ್ಲಿಮ್ ಬಾಂಧವರಿಗೆ ಶುಭ ಕೋರಲಿದ್ದಾರೆ’
ಬಂಧು-ಮಿತ್ರರು,ನೆರೆ-ಹೊರೆಯವರು ಹಾಗೂ ಬಡವರು-ಕಡುಬಡವರೊಂದಿಗೆ ಹಬ್ಬದೂಟವನ್ನು ಸವಿದು ಸಂಭ್ರಮಿಸಲು ವಿಶೇಷ ವೇದಿಕೆಯಾಗಲಿರುವ ಬಕ್ರೀದ್ ಹಬ್ಬವು ಬಡವ-ಬಲ್ಲಿದ ಎಂಬ ಬೇಧಭಾವವಿಲ್ಲದೆ ಎಲ್ಲರೊಂದಿಗೆ ಸುಮಧುರ ಬಾಂಧವ್ಯವನ್ನು ಬೆಸೆಯಲು ಮಾನವೀಯ ಸ್ಪರ್ಶ ಕಲ್ಪಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಕ್ರೀದ್ ಹಬ್ಬವು ನಮ್ಮೆಲ್ಲರನ್ನೂ ಒಗ್ಗೂಡಿಸಲಿ. ಕೋಮು-ಸೌಹಾರ್ದತೆ ಮೂಡಿಸಲು ಪ್ರೇರಣೆ ಹಾಗೂ ಸ್ಫೂತಿಯನ್ನು ನೀಡುವ ಮೂಲಕ ಸಮೃದ್ಧ ಕರ್ನಾಟಕವನ್ನು ರೂಪಿಸಲು ಹಾಗೂ ಬಲಿಷ್ಠ ಭಾರತವನ್ನು ನಿರ್ಮಿಸಲು ಬಕ್ರೀದ್‌ನ ಸಡಗರ ಮತ್ತು ಸಂಭ್ರಮ ನಮ್ಮೆಲ್ಲರಿಗೂ ಶಕ್ತಿಯನ್ನೀಯಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.







