ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಸಲಹಾ ಸಮಿತಿ ಸಭೆ: ಟಿ.ಆರ್. ಸುರೇಶ್
ಮಂಗಳೂರು, ಸೆ. 1: ಪಾಲಿಕೆ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕಾಗಿ ಸ್ಥಳೀಯ ನಾಗರಿಕ ಪ್ರದೇಶದಲ್ಲಿ ಟ್ರಾಫಿಕ್ ಸಲಹಾ ಸಮಿತಿಯ ಸಭೆಯನ್ನು ನಡೆಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್‌ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಕರೆಗೆ ಈ ಉತ್ತರ ನೀಡಿದರು.
ಬೊಂದೇಲ್‌ನ ಸಾರ್ವಜನಿಕರೊಬ್ಬರು ಕರೆ ಮಾಡಿ, ಕೆಇಬಿ ಕಾಲನಿ, ಕುದುರೆಮುಖ ಟೌನ್‌ಶಿಪ್ ಪ್ರದೇಶಗಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತವೆ. ಇಲ್ಲಿ ರಸ್ತೆಗಳಲ್ಲಿ ರಿಫ್ಲೆಕ್ಟರ್ ಇಲ್ಲ. ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಹಂಪ್‌ಗಳೂ ಕಾಣುವುದಿಲ್ಲ ಎಂದು ದೂರಿದರು.
ನಗರದಲ್ಲಿ ಮೊಬೈಲ್ ಸಿಮ್ ಅಂಗಡಿಗಳು ಅನಧಿಕೃತವಾಗಿ ಬೇರೆಯವರಿಗೆ ಇನ್ನೊಂದು ದಾಖಲೆಯಲ್ಲಿ ಸಿಮ್ ನೀಡುತ್ತಿವೆ. ಇದರಿಂದ ಮೂಲ ದಾಖಲೆ ನೀಡಿದವರು ವಂಚನೆಗೆ ಒಳಗಾಗುತ್ತಿದ್ದಾರೆ. ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯೊಬ್ಬರು ದೂರು ನೀಡಿದರು.
ಈ ಬಗ್ಗೆ ಕಾರ್ಯಾಚರಣೆ ನಡೆಸುವುದಾಗಿ ಆಯುಕ್ತರು ತಿಳಿಸಿದರು.
ಖಾಸಗಿ ಬಸ್‌ಗಳಲ್ಲಿ ಟಿಕೆಟ್ ಮೆಷಿನ್‌ನ್ನು ಕಡ್ಡಾಯಗೊಳಿಸಲಾಗಿದ್ದರೂ ಕೆಲವು ಬಸ್‌ಗಳಲ್ಲಿ ಅನುಷ್ಠಾನಗೊಳಿಸಿಲ್ಲ. ದೇರಳಕಟ್ಟೆಯಲ್ಲಿ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಬೈಕ್‌ಗಳಲ್ಲಿ ಹೆಲ್ಮೆಟ್‌ಧರಿಸದೆ ಬೈಕ್ ಚಲಾಯಿಸುತ್ತಾರೆ. ಅಪಾಯಕಾರಿ ಮೊಬೈಲ್ ಗೇಮ್ಸ್ ಹಾಗೂ ಟ್ರಾಫಿಕ್ ಬಗ್ಗೆ ಶಾಲಾ ಕಾಲೇಜುಗಳಲ್ಲಿ ತಿಳಿವಳಿಕೆ ಮೂಡಿಸಬೇಕು ಎಂಬ ಹಲವಾರು ದೂರುಗಳು, ಅಹವಾಲುಗಳು ಇಂದಿನ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಸಂಚಾರಿ ಎಸಿಪಿ ತಿಲಕ್‌ಚಂದ್ರ, ಸಂಚಾರಿ ಇನ್‌ಸ್ಪೆಕ್ಟರ್ ಸುರೇಶ್, ಎಎಸ್‌ಐ ಶ್ಯಾಮ್, ಸಿಬ್ಬಂದಿ ಪುುಷೋತ್ತಮಮ ಉಪಸ್ಥಿತರಿದ್ದರು.
ಬಡ್ಡಿ ವ್ಯವಹಾರಸ್ಥರ ಬಗ್ಗೆ ಕ್ರಮಕ್ಕೆ ಆಗ್ರಹ
ನಗರ ಪ್ರದೇಶದಲ್ಲಿ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮರೋಳಿಯ ವಿದ್ಯಾರ್ಥಿನಿಯೊಬ್ಬರು ಆಗ್ರಹಿಸಿದರು. 6 ತಿಂಗಳ ಹಿಂದೆ ನನ್ನ ಸಹಪಾಠಿಯ ತಂದೆ ಬಡ್ಡಿ ವ್ಯವಹಾರದಿಂದ ವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಬಡ್ಡಿ ವ್ಯಾಪಾರಿಗಳ ವಿರುದ್ಧ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದರು. ಈ ಬಗ್ಗೆ ನಿರ್ಭೀತಿಯಿಂದ ದೂರು ನೀಡಬಹುದು. ದೂರುದಾರರಿಗೆ ಸೂಕ್ತ ರಕ್ಷಣೆಯನ್ನು ನೀಡಲಾಗುವುದು ಎಂದು ಆಯಕ್ತ ಸುರೇಶ್ ಕುಮಾರ್ ತಿಳಿಸಿದರು.







