ಉಪ್ಪಿನಂಗಡಿ: ಪರಿಸರದಲ್ಲಿ ಸಂಭ್ರಮದ ಈದುಲ್ ಅಝ್‍ಹಾ ಆಚರಣೆ

ಉಪ್ಪಿನಂಗಡಿ, ಸೆ.1: ತ್ಯಾಗ, ಬಲಿದಾನ, ಐಕ್ಯತೆಯ ಸಂಕೇತವಾಗಿರುವ "ಈದುಲ್ ಅಝ್"ಹಾ ಬಕ್ರೀದ್ ಹಬ್ಬವನ್ನು ಉಪ್ಪಿನಂಗಡಿ, ಆತೂರು, ಗಂಡಿಬಾಗಿಲು ಪರಿಸರದಲ್ಲಿ ಸಂಭ್ರಮದಿಂದ ಶುಕ್ರವಾರ ಆಚರಿಸಿದರು.
ಗಂಡಿಬಾಗಿಲು: ಇಲ್ಲಿನ ಕುತುಬಿಯಾ ಜುಮಾ ಮಸೀದಿಯಲ್ಲಿ ಖತೀಬ್ ಹಾದಿ ಅನಸ್ ತಂಙಳ್ ಅವರ ನೇತೃತ್ವದಲ್ಲಿ ನಮಾಝ್ ಹಾಗೂ ಕುತುಬಾ ನಡೆಸಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಬಳಿಕ ಹಬ್ಬದ ಸಂದೇಶ ನೀಡಿ ಅನಸ್ ತಂಙಳ್ ಮಾತನಾಡಿ, ಅಲ್ಲಾಹುವಿನ ಸ್ಮರಣೆ, ಹರಕೆ ಸಂದಾಯಕ್ಕೆ ಮಾತ್ರ ಸೀಮಿತ ಆಗದೆ, ಇಸ್ಲಾಂ ಧರ್ಮ ತೋರಿಸಿಕೊಟ್ಟ ಹಾದಿಯಲ್ಲಿ ಸಾಗಬೇಕು ಮತ್ತು ಒಳಿತಿನ ಪ್ರವರ್ತನ ಇರಬೇಕು ಎಂದ ಅವರು, ಇಬ್ರಾಹಿಂ ನೆಬಿಯವರ ತ್ಯಾಗ ಜೀವನ ನಮಗೆ ಮಾದರಿ ಆಗಬೇಕು ಎಂದು ಕರೆ ನೀಡಿದರು.
ಹಬ್ಬದ ಸಡಗರ ಹಂಚಿಕೊಂಡ ಮುಸ್ಲಿಂ ಬಾಂಧವರು ಬಂಧು-ಕುಟುಂಬ ಸಂಬಂಧಗಳನ್ನು ಭೇಟಿ ಮಾಡಿ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.
ಆತೂರು: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ವಿಶೇಷ ನಮಾಜು, ಖುತುಬಾ, ಪ್ರಾರ್ಥನೆ ನಡೆಸಲಾಯಿತು.
ಆತೂರು ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಪ್ರಭಾರ ಖತೀಬ್ ಹಂಝ ದಾರಿಮಿಯವರ ನೇತೃತ್ವದಲ್ಲಿ ವಿಶೇಷ ನಮಾಜು, ಖುತುಬಾ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.
ಉಪ್ಪಿನಂಗಡಿ: ಇಲ್ಲಿನ ಕೇಂದ್ರ ಜುಮಾ ಮಸೀದಿಯಲ್ಲಿ ಮಸೀದಿಯ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ನೇತೃತ್ವದಲ್ಲಿ ನಮಾಝ್ ಮತ್ತು ಕುತುಬಾ ನಡೆದು ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.







