ದೇಶದಲ್ಲಿ ಚೀನಾ ವಸ್ತುಗಳ ಬಳಕೆ, ಮಾರಾಟವನ್ನು ನಿಷೇಧಿಸಬೇಕು: ಅರುಣ್ ಕುಮಾರ್ ಪುತ್ತಿಲ

ಪುತ್ತೂರು, ಸೆ.1: ದೇಶದ ಸಾರ್ವಭೌಮತೆಗೆ ಹಾಗೂ ಏಕತೆಗೆ ಧಕ್ಕೆ ತರುವ ಚೀನಾದ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುವ ಮೂಲಕ ಸ್ವದೇಶಿ ಕೈಗಾರಿಕೆಗಳ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದರು.
ತಾಲೂಕಿನ ಬಸ್ ನಿಲ್ದಾಣದ ಬಳಿ ಶುಕ್ರವಾರ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೇ. 70 ರಷ್ಟು ವಸ್ತುಗಳನ್ನು ಚೀನಾ ದೇಶದಿಂದ ಆಮದು ಮಾಡಿ ಭಾರತದಲ್ಲಿ ಮಾರಾಟ ನಡೆಸಲಾಗುತ್ತಿದೆ. ಇದರಿಂದ ನಮ್ಮ ಕೈಗಾರಿಕೆಗಳು ಮೂಲೆಗುಂಪಾಗುತ್ತಿವೆ. ನಮ್ಮ ಹಣ ತಿಂದು ನಮ್ಮ ದೇಶದ ಮೇಲೆಯೇ ದಾಳಿ ನಡೆಸಲು ಮುಂದಾಗುತ್ತಿರುವ ಚೀನಾ ವಿರುದ್ಧ ನಮ್ಮ ಹೋರಾಟ ನಿರಂತರವಾಗಬೇಕಾಗಿದೆ. ಚೀನಾದ ವಸ್ತುಗಳು ನಮ್ಮ ಬದುಕಿನಿಂದ ದೂರವಾಗಬೇಕು. ವ್ಯಾಪಾರಿಗಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದರು.
ಸಮಾಜ ಸೇವಕ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಭಾರತದಲ್ಲಿ ತಂತ್ರಜ್ಞಾನ, ಕೈಗಾರಿಕೆಗಳಿಗೆ ಕೊರತೆ ಇಲ್ಲದಿದ್ದರೂ ಕಡಿಮೆ ಬೆಲೆಗೆ ಸಿಗುವ ಚೀನಾ ವಸ್ತುಗಳತ್ತ ನಾವು ಆಕರ್ಷಿತರಾಗುತ್ತಿದ್ದೇವೆ. ಕಳೆದ 7 ದಶಕಗಳಲ್ಲಿ ಭಾರತವನ್ನು ಚೀನಾ ಬೆನ್ನಟ್ಟುತ್ತಿದ್ದರೆ , 2014ರಿಂದ ಭಾರತ ತಿರುಗಿ ನಿಂತಿದೆ. ಭಾರತದ ಆರ್ಥಿಕತೆಗೆ ದೃಢತೆ ಸಿಗಬೇಕಾದರೆ ನಾವು ಚೀನಾದ ವಸ್ತುಗಳಿಂದ ದೂರವಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಬಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಚೀನಾ ವಸ್ತುಗಳಿಗೆ ಬೆಂಕಿ ಹಂಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಜಯಂತಿ ನಾಯಕ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಪುತ್ತೂರು ನಗರಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು, ಬಜರಂಗದಳ ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ, ಬಜರಂಗದಳ ಸಹಸಂಚಾಲಕ ಹರೀಶ್ ದೋಳ್ಪಾಡಿ, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಶ್ರಿಧರ್ ತೆಂಕಿಲ, ಮೋಹಿನಿ ದಿವಾಕರ್, ಅರ್ಪಣಾ ಶಿವಾನಂದ್, ಸುಕೀರ್ತಿ ರವೀಂದ್ರನಾಥ್, ಜಯರಾಮ ಪೂಜಾರಿ ಬಡಾವು ಮತ್ತಿತರರಿದ್ದರು. ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ ಸ್ವಾಗತಿಸಿದರು. ಪುತ್ತೂರು ಜಿಲ್ಲಾ ಬಜರಂಗದಳ ಸಂಚಾಲಕ ಭಾಸ್ಕರ ಧರ್ಮಸ್ಥಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಜರಂಗದಳದ ಮುಖಂಡ ವಿಶಾಕ್ ರೈ ವಂದಿಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.







