ಜನಿಸಿದ ಮಗುವಿಗೆ ಎದೆಹಾಲು ನೀಡುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ನ್ಯಾ.ಜಿನರಾಳ್ಕರ್

ತುಮಕೂರು, ಸೆ.1: ಜನಿಸಿದ ಮಗುವಿಗೆ ತಾಯಂದಿರು ಕೂಡಲೇ ಎದೆಹಾಲನ್ನು ನೀಡುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ.ಜಿನರಾಳ್ಕರ್ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ತುಮಕೂರು ನಗರದ ಕೋತಿ ತೋಪು ಇಲ್ಲಿ ಇರುವ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ”ವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ತಾಯಂದಿರು ಮಗು ಜನಿಸಿದ ಕೂಡಲೇ ಮಗುವಿಗೆ ತಮ್ಮ ಎದೆಹಾಲನ್ನು ಕುಡಿಸುವುದರಿಂದ, ಆ ಹಾಲಿನಲ್ಲಿರುವ ಎಲ್ಲಾ ಪೌಷ್ಟಿಕಾಂಶಗಳು ಮಗುವಿಗೆ ದೊರಕಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ನೆರವಾಗಲಿದೆ. ಆದುದರಿಂದ ತಾಯಂದಿರು ವಿಶೇಷವಾಗಿ ಗ್ರಾಮೀಣ ಮಹಿಳೆಯರು ಹುಟ್ಟಿದ ಮಗುವಿಗೆ ತಮ್ಮ ಮೊದಲ ಸ್ತನ್ಯಪಾನವನ್ನು ಮಾಡಿಸಬೇಕು. ಎದೆಹಾಲು ಅಮೃತಕ್ಕೆ ಸಮಾನ ಎಂದರು.
ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಕುಲ್ಕರ್ಣಿಯವರು ಮಾತನಾಡಿ, ನಮ್ಮ ದೇಶದಲ್ಲಿ ಅಪೌಷ್ಟಿಕತೆಯಿಂದ ಶೇ.40ರಷ್ಟು ಮಕ್ಕಳು ಬಳಲುತ್ತಿದ್ದಾರೆ, ತಾಯಂದಿರು ಮಕ್ಕಳಿಗೆ ಸ್ತನ್ಯಪಾನವನ್ನು ಕನಿಷ್ಠ 2 ವರ್ಷದವರೆಗೂ ಮಾಡಿಸಿದಲ್ಲಿ ಅಂತಹ ಮಕ್ಕಳಲ್ಲಿ ರೋಗನಿ ರೋಧಕ ಶಕ್ತಿ ಹೆಚ್ಚುತ್ತದೆ, 6ತಿಂಗಳ ನಂತರ ಮಗುವಿಗೆ ನಮ್ಮ ಮನೆಯಲ್ಲಿ ಇರುವ ಆಹಾರ ಪದಾರ್ಥಗಳಿಂದಲೇ ಉತ್ತಮವಾದ ಪೌಷ್ಠಿಕ ಆಹಾರವನ್ನು ತಯಾರಿಸಿ ದ್ರವರೂಪದಲ್ಲಿ ತಿನ್ನಿಸುವುದನ್ನು ರೂಡಿಸಿಕೊಳ್ಳಿ. ತಾಯಂದಿರು ತಮ್ಮ ಕೈಗಳನ್ನು ಶುಭ್ರಮಾಡಿಕೊಂಡು ಉಗರು ಬಣ್ಣಗಳಿಲ್ಲದ ಕೈಗಳಿಂದ ಕಂದಮ್ಮಗಳಿಗೆ ಆಹಾರವನ್ನು ತಿನ್ನಿಸಿ,ಅಪೌಷ್ಠಿಕತೆಯಿಂದ ಮಕ್ಕಳಲ್ಲಿ ಊತರೋಗ,ಸವಕಳಿ ರೋಗಗಳು ಸೇರಿದಂತೆ ಇನ್ನೂ ಅನೇಕ ರೋಗಗಳು ಉಂಟಾಗುತ್ತವೆ ಎಂದು ಅವರು ವಿವರಿಸಿದರು.
ಡಾ.ಪಾಳ್ಯ ಮೊಹಿಯುದ್ದೀನ್ ಮಾತನಾಡಿ, ತಾಯಿ ಹಾಲಿನಲ್ಲಿ ದೊರಕುವ ಜೀವ ಸತ್ವಗಳು ಬೇರಾವ ಆಹಾರ ಪದಾರ್ಥಗಳಿಂದ ದೊರಕುವುದಿಲ್ಲ, ಇತ್ತೀಚಿನ ಅಧ್ಯಯನವೊಂದು ಎದೆಹಾಲು ಕುಡಿದ ಮಕ್ಕಳು ದೊಡ್ಡವರಾದಾಗ ಅವರು ಬೊಜ್ಜು, ಮಧುಮೇಹ, ಇನ್ನಿತರೆ ರೋಗಗಳಿಂದ ಮುಕ್ತರಾಗಿರುತ್ತಾರೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಎಚ್‍ಒ ಡಾ.ಎಚ್.ವಿ.ರಂಗಸ್ವಾಮಿ ಮಾತನಾಡಿ, ನಮ್ಮ ನೆಲಮೂಲದ ಆಹಾರವೇ ಶ್ರೇಷ್ಠ, ಇದರಲ್ಲಿ ಸಸಾರಜನಕ,ಮೆದಸ್ಸು,ಶರ್ಕರ ಪಿಷ್ಠಗಳು ಮುಂತಾದ ಮಗುವಿನ ಬೆಳವಣಿಗೆಗೆ ಬೇಕಾದ ಜೀವ ಸತ್ವಗಳು ಹೇರಳವಾಗಿರುತ್ತವೆ. ಆದ್ದರಿಂದ, ಚಿಕ್ಕ ಮಕ್ಕಳಿಗೆ ನಮ್ಮಲ್ಲಿ ಸಿಗುವ ಆಹಾರ ಪದಾರ್ಥಗಳನ್ನೇ ನೀಡಬೇಕೆಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್, ಡಾ.ಕೇಶವರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಪರುಶುರಾಮಯ್ಯ ಮುಂತಾದವರಿದ್ದರು.







