ಜನರು ಆಂತರಿಕವಾಗಿ ಸ್ಮಾರ್ಟ್ ಆದರೆ ನಗರವು ತಾನಾಗಿಯೇ ಸ್ಮಾರ್ಟ್ ಆಗಲಿದೆ: ಡಿ.ಎಸ್. ರಮೇಶ್

ದಾವಣಗೆರೆ, ಸೆ.1: ನಗರದ ಸ್ಮಾರ್ಟ್‍ಸಿಟಿಯಲ್ಲಿ ಅನೇಕ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಜನರು ಆಂತರಿಕವಾಗಿ ಸ್ಮಾರ್ಟ್ ಆದರೆ ನಗರವು ತಾನಾಗಿಯೇ ಸ್ಮಾರ್ಟ್ ಆಗಲಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ಮಾರ್ಟ್ ಸಿಟಿ ಕಾನ್ ಕ್ಲೇವ್ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರವು ಇನ್ನೂ ಮೂರು ವರ್ಷಗಳಲ್ಲಿ ಪರಿಪೂರ್ಣವಾಗಿ ಸ್ಮಾರ್ಟ್ ಆಗಲಿದೆ. ಪ್ರತಿಯೊಬ್ಬರು ತನ್ನ ಮನೆ ಹೇಗೆ ಸ್ವಚ್ಛವಾಗಿರಬೇಕು ಎಂದು ಬಯಸುತ್ತಿರೆಯೋ, ಹಾಗೆಯೇ ನಗರವೂ ಸ್ವಚ್ಛವಾಗಿರಬೇಕು ಎಂಬ ಮನೋಭಾವನೆ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.
ವೈಫೈ, ನೀರು, ರಸ್ತೆ ಸೇರಿದಂತೆ ಹೀಗೆ ಅನೇಕ ಸೌಲಭ್ಯಗಳು ಒಳಗೊಂಡಿದ್ದು, ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಅವುಗಳ ಬಳಕೆ ಮಾಡಿಕೊಳ್ಳದೇ ಹೋದರೆ, ಹಾಕಿರುವ ಶ್ರಮ, ಹಣ ವ್ಯರ್ಥವಾಗುತ್ತದೆ ಎಂದು ತಿಳಿಸಿದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿಅರವಿಂದ್ ಮಾತನಾಡಿ, ಸ್ಮಾರ್ಟ್ ಸಿಟಿಯಾಗಲು ಮಂಡಕ್ಕಿ ಭಟ್ಟಿಯೇ ಕಾರಣ. ವಿಸ್ತ್ರತ ಯೋಜನೆ ತಯಾರಿಸುವ ವೇಳೆ ಮಂಡಕ್ಕಿ ಭಟ್ಟಿ ಸ್ಥಳಾಂತರದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಮೂರು ವರ್ಷವಾಯಿತು. ಇದುವರೆಗೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇವಲ ರಾಜ್ಯ ಸರಕಾರದ ಅನುದಾನದಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳು ಆಗುತ್ತಿದೆ. ಹಳೆ ದಾವಣಗೆರೆ ಪ್ಯಾನ್‍ಸಿಟಿ ರೀತಿ ನಿರ್ಮಾನಗೊಳ್ಳಲಿದೆ. ಇಲ್ಲಿ 10 ರೋಡ್‍ಗಳು ಸ್ಟಾರ್ಟ್ ಆಗಲಿದ್ದು, ಮುಂದಿನ ವಾರದಲ್ಲಿ ಮೂರು ರಸ್ತೆಗಳ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು.
ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿ, ಅಮೆರಿಕಾದಲ್ಲಿ ಅವರ ಸಂಪನ್ಮೂಲಗಳನ್ನು ಅವರೇ ಕ್ರೋಢೀಕರಣ ಮಾಡಿಕೊಳ್ಳುತ್ತಾರೆ. ಇದರಲ್ಲಿಯೇ ಎಲ್ಲ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಾರೆ. ಇಲ್ಲಿಯೂ ಅದೇ ರೀತಿಯಲ್ಲಿ ಆಗಬೇಕು. ಸ್ಮಾರ್ಟ್‍ಸಿಟಿಗೆ ಅಗತ್ಯವಾಗಿ ಸಂಪನ್ಮೂಲ ಸದ್ಬಳಕೆ, ನಿರ್ವಹಣೆ, ಪೂರ್ಣ ಪ್ರಮಾಣದ ಶಿಕ್ಷಣ, ದಿನದ 24 ಗಂಟೆ ವಿದ್ಯುಚ್ಯಕ್ತಿ, ಕುಡಿವ ನೀರು, ಫೈರ್ ಆ್ಯಂಡ್ ಎರ್ಮಜೆನ್ಸಿ, ಶೀಘ್ರವೇ ದಾಖಲೆ ಸಿಗಬೇಕು. ಉತ್ತಮ ಆರೋಗ್ಯ, ಚಿಕಿತ್ಸೆ ಸಂಪೂರ್ಣವಾಗಿ ಸಿಗಬೇಕು. ರಿಕ್ರೀಯೆಷನ್ ಸೆಂಟರ್, ಸೆಫ್ಟಿ , ಬಸ್ ಸೌಲಭ್ಯ ಇರಬೇಕಾಗಿದೆ. ಇದಕ್ಕೆ ಪೂರಕವಾಗಿ ಹೊಸ-ಹೊಸ ಅವಿಷ್ಕಾರಗಳು ನಡೆಯುತ್ತಿದೆ. ಈಗಾಗಲೇ ಗಾಜಿನ ಮನೆ ನಿರ್ಮಾಣ ಮಾಡಲಾಗಿದೆ. ಸ್ಮಾರ್ಟ್‍ಸಿಟಿಗೆ ಸಂಬಂಧಪಟ್ಟ ಕೆಲಸಗಳು ಶೀಘ್ರವೇ ಆಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ. ಅರವಿಂದ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಸ್. ಸುರೇಶ್, ಬೆಂಗಳೂರಿನ ಐಇಇಇ ಕಾಮ್ಸಾಕ್‍ನ ಕಾರ್ಯದರ್ಶಿ ಕಿಶೋರ್, ಬಾಪೂಜಿ ಶಿಕ್ಷಣ ಸಂಸ್ಥೆ ಖಂಚಾಚಿ ಎ.ಸಿ. ಜಯಣ್ಣ ಇದ್ದರು.







